ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನೆರೆಹಾನಿ ವೀಕ್ಷಣೆಗೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಸ ರದ್ದಾಗಿದ್ದು, ಇದೀಗ ರೈತರ ಹಾಗೂ ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಎಡಬಿಡದೆ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣವಿದೆ. ಈ ಕಾರಣದಿಂದ ಶಿವಮೊಗ್ಗದಿಂದ ಹೆಲಿಕಾಪ್ಟರ್ ಮೂಲಕ ಕಾರವಾರ ಬಂದು ಹಾವೇರಿಗೆ ತೆರಳಬೇಕಿದ್ದ ಸಿಎಂ ಉತ್ತರಕನ್ನಡ ಪ್ರವಾಸ ರದ್ದಾಗಿ ಕೇವಲ ಹಾವೇರಿಗೆ ಮಾತ್ರ ತೆರಳಲಿದ್ದಾರೆ. ಆದರೆ, ಕಳೆದ 15 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಒಂದು ವಾರಗಳ ಕಾಲ ನದಿಯಂಚಿನ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಮನೆಗಳಿಗೆ ಹಾನಿಯಾಗಿ, ಕೃಷಿ ಭೂಮಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತದ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 662 ಕೋಟಿ ರೂ ಹಾನಿಯಾಗಿದೆ.
ಇತರ ನೆರೆಹಾನಿಗೊಳಗಾದ ಜಿಲ್ಲೆಗಳಿಗೆ ತೆರಳಿ ನೆರೆಹಾನಿ ವೀಕ್ಷಿಸಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಉತ್ತರಕನ್ನಡ ಜಿಲ್ಲೆಗೆ ಆಗಮಿಸಿರಲಿಲ್ಲ. ಇದು ಜಿಲ್ಲೆಯ ಜನರ ಮತ್ತು ನೆರೆಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಇಂದು ಆಗಮಿಸಬೇಕಿದ್ದ ಮುಖ್ಯಮಂತ್ರಿಗಳ ಪ್ರವಾಸ ಮತ್ತೆ ಮಳೆಯ ಕಾರಣಕ್ಕೆ ರದ್ದಾಗಿದೆ. ಇದೀಗ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿ ಉತ್ತರ ಕನ್ನಡ ಭಾಗದ ಜನ ನಿರ್ಗತಿಕರಾಗಿದ್ದಾರೆ. ಇಷ್ಟಾದರೂ ಕೂಡ ಜಿಲ್ಲೆಗೆ ಬರಲಿದ್ದ ಮುಖ್ಯಮಂತ್ರಿ ಪ್ರವಾಸ ರದ್ದಾಗಿರುವುದು ಸಾಕಷ್ಟು ಬೇಸರವಾಗಿದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಸಿಎಂ ಆಗಮಿಸುವ ಸುದ್ದಿ ಹಿನ್ನೆಲೆ ಬೆಳೆಗ್ಗೆಯಿಂದಲೇ ಕಾರವಾರಕ್ಕೆ ಆಗಮಿಸಿದ್ದ ಜನರು ಸಿಎಂಗಾಗಿ ಕಾದಿದ್ದರು. ಸಿಎಂ ಭೇಟಿ ಮಾಡಬೇಕಿದ್ದ ಕದ್ರಾ ಹಾಗೂ ಗೋಟೆಗಾಳಿಯಲ್ಲಿ ಸಂತ್ರಸ್ತರು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರು. ಆದರೆ ಇದೀಗ ಸಿಎಂ ಪ್ರವಾಸ ರದ್ದಾಗಿರುವುದು ಜನರಿಗೆ ಅಸಮಾಧಾನ ತಂದಿದೆ.