ಕಾರವಾರ: ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು, ಅವರನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು ಎನ್ನುವ ಸರ್ಕಾರದ ನಿಯಮವನ್ನು ಹಲವೆಡೆ ಗಾಳಿಗೆ ತೂರಲಾಗಿದೆ. ನಿಯಮ ಮೀರಿ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದ ಪ್ರಕರಣಗಳು ಕರಾವಳಿ ನಗರಿ ಕಾರವಾರದಲ್ಲಿ ಕಂಡುಬಂದಿದ್ದು, ಅಧಿಕಾರಿಗಳು ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಒಂದೆಡೆ ಬೇಕರಿ ಒಳಹೊಕ್ಕು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು. ಇನ್ನೊಂದೆಡೆ ಪೊಲೀಸರನ್ನು ಕಂಡು ಕಕ್ಕಾಬಿಕ್ಕಿಯಾದ ಮಾಲೀಕರು. ಮತ್ತೊಂದೆಡೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರುವ ಬಾಲಕಾರ್ಮಿಕರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ. ಮಕ್ಕಳಿಂದ ದುಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ ಕಾರವಾರದಲ್ಲಿ ಬಾಲ ಕಾರ್ಮಿಕ ಪದ್ಧತಿ ಮಾತ್ರ ಇನ್ನೂ ಜೀವಂತವಾಗಿದೆ. ಈ ಹಿನ್ನೆಲೆ ಶುಕ್ರವಾರ ನಗರದ ವಿವಿಧೆಡೆ ಬಾಲ ಕಾರ್ಮಿಕ ತನಿಖಾ ತಂಡ ದಾಳಿ ನಡೆಸಿದ್ದು, ಕೆಲಸದಲ್ಲಿ ತೊಡಗಿದ್ದ ಬಾಲಕರನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ.
ಬಾಲ ಕಾರ್ಮಿಕ ತನಿಖಾ ತಂಡದಿಂದ ದಾಳಿ:
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ, ಪೊಲೀಸ್ ಒಳಗೊಂಡ ಬಾಲ ಕಾರ್ಮಿಕ ತನಿಖಾ ತಂಡವನ್ನ ರಚನೆ ಮಾಡಿಕೊಂಡಿದ್ದು, ಕಾರವಾರ ನಗರದ ವಿವಿಧೆಡೆ ದಾಳಿ ನಡೆಸಿದರು. ಕೆಲಸದಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ನಗರದ ಬೇಕರಿ, ಹೊಟೇಲ್‌ಗಳು ಸೇರಿದಂತೆ ಸುಮಾರು ಐದು ಕಡೆಗಳಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಎರಡು ಕಡೆ ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ.
ಮೂವರು ಬಾಲಕಾರ್ಮಿಕರು ಪತ್ತೆ:
ನಗರದ ಪಿಕಳೆ ರಸ್ತೆ ಸಮೀಪದಲ್ಲಿರುವ ಪಾಪ್ಯುಲರ್ ಬೇಕರಿಯಲ್ಲಿ ಓರ್ವ ಬಾಲ ಕಾರ್ಮಿಕ ಕೆಲಸ ಮಾಡುತ್ತಿದ್ದ. ಇನ್ನೊಂದೆಡೆ ಕಡಲತೀರದಲ್ಲಿ ಇಂಟರ್‌ಲಾಕ್ ಅಳವಡಿಕೆ ಕೆಲಸ ಮಾಡುತ್ತಿದ್ದ ಇಬ್ಬರು ಬಾಲ ಕಾರ್ಮಿಕರನ್ನು ಬಾಲ ಕಾರ್ಮಿಕ ತನಿಖಾ ತಂಡ ಪತ್ತೆ ಮಾಡಿದೆ. ಬಾಲಕರ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು ಅವರು ಅಪ್ರಾಪ್ತರು ಅನ್ನೋದು ತಿಳಿದುಬಂದಿದೆ. ಈ ಹಿನ್ನೆಲೆ ಅವರನ್ನ ಕೆಲಸಕ್ಕೆ ಇರಿಸಿಕೊಂಡವರ ಕುರಿತು ಮಾಹಿತಿ ಕಲೆಹಾಕಿದ್ದು ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ತನಿಖಾ ತಂಡ ಮುಂದಾಗಿದೆ. ಇನ್ನೂ ಕೆಲವೆಡೆ ಅಧಿಕಾರಿಗಳನ್ನು ಕಂಡೊಡನೆ ಬಾಲಕಾರ್ಮಿಕರು ಓಡಿ ಹೋದ ಘಟನೆಗಳು ಸಹ ನಡೆದಿವೆ. ಇಂತಹ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
479 ಕಡೆಗಳಲ್ಲಿ ದಾಳಿ:
ರಾಜ್ಯವನ್ನು 2024 ರೊಳಗಾಗಿ ಬಾಲ ಕಾರ್ಮಿಕ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯನ್ನ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 479 ಕಡೆಗಳಲ್ಲಿ ಬಾಲ ಕಾರ್ಮಿಕ ತನಿಖಾ ತಂಡ ದಾಳಿ ನಡೆಸಿದೆ. ಈ ವೇಳೆ ಹಲವೆಡೆ ಅಪಾಯಕಾರಿ ರೀತಿಯಲ್ಲಿ ಮಕ್ಕಳನ್ನ ದುಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದ್ದು, ಅಂತಹ ಮಕ್ಕಳನ್ನ ರಕ್ಷಣೆ ಮಾಡಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಬಾಲಕಿಯರಿದ್ದಲ್ಲಿ ಅವರನ್ನು ಬಾಲಕಿಯರ ಬಾಲಮಂದಿರದಲ್ಲಿ ಇರಿಸಿ ಪೋಷಿಸಲಾಗುತ್ತದೆ. ಅಂತಹ ಮಕ್ಕಳ ಪಾಲಕರು ಬಂದ ನಂತರ ಅವರಿಗೆ ಮಕ್ಕಳನ್ನು ಒಪ್ಪಿಸಲಾಗುತ್ತದೆ. ಇಲ್ಲವಾದಲ್ಲಿ 18 ವರ್ಷ ತುಂಬುವವರೆಗೆ ಅಂತಹ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಕರಿಯಲ್ಲಿದ್ದ ಬಾಲಕ ತಾನಾಗಿಯೇ ಕೆಲಸಕ್ಕೆ ಸೇರಿಕೊಂಡಿದ್ದು, ಆತನ ವಯಸ್ಸಿನ ಬಗ್ಗೆ ತಮಗೆ ಗೊತ್ತಿರಲಿಲ್ಲ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದಾಗ ಅಗತ್ಯ ಮಾಹಿತಿ ನೀಡಿದ್ದೇವೆ ಅಂತ ಬೇಕರಿಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರ ನೆರೆ ಅಧ್ಯಯನ ತಂಡದ ಎದುರು ಪರಿಹಾರಕ್ಕಾಗಿ ಅಂಗಲಾಚಿದ ಅನ್ನದಾತರು
ಒಟ್ಟಾರೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದವರಿಗೆ ಬಾಲ ಕಾರ್ಮಿಕ ತನಿಖಾ ತಂಡ ಶಾಕ್ ನೀಡಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಮೂಲಕ ಜಿಲ್ಲೆ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯಾಗಲಿ ಅನ್ನೋದು ನಮ್ಮ ಆಶಯ.