ಕಾರವಾರ: ಕರಾವಳಿ ನಗರ ವ್ಯಾಪ್ತಿಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿದ್ದರೂ ಸಹ ವಾಹನ ಸವಾರರಿಗೆ ಕಂಟಕ ಮಾತ್ರ ತಪ್ಪಿಲ್ಲ. ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ನಿಲ್ಲುವ ಜಾನುವಾರುಗಳಿಂದಾಗಿ ಪದೇ ಪದೆ ಅಪಘಾತಗಳು ಸಂಭವಿಸುವುದು ಒಂದೆಡೆಯಾದ್ರೆ, ಇನ್ನೊಂದೆಡೆ ಜಾನುವಾರು ಕಳ್ಳತನಕ್ಕೂ ದಾರಿಯಾಗಿತ್ತು. ಆದ್ರೀಗ ಬಿಡಾಡಿ ದನಗಳ ಸಮಸ್ಯೆಗೆ ಪರಿಹಾರ ಒದಗಿಸೋಕೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪರಿಹಾರವೊಂದನ್ನು ಸೂಚಿಸಿದ್ದಾರೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಥಕ್ಕೇರಿಸುವ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದೆ. ವಾಹನ ಸಂಚಾರಕ್ಕೆ ಹೆದ್ದಾರಿ ಸುಗಮವಾಗಿದ್ದು, ಕಾರವಾರ-ಅಂಕೋಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಮಾತ್ರ ಸವಾರರಿಗೆ ಜಾನುವಾರುಗಳ ಕಾಟ ಎದುರಾಗಿದೆ. ಹೆದ್ದಾರಿ ಮಾರ್ಗದಲ್ಲೇ ಎಲ್ಲೆಂದರಲ್ಲಿ ಬಿಡಾಡಿ ದನಗಳು ನಿಂತುಕೊಳ್ಳುತ್ತಿದ್ದು, ಇದರಿಂದ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಾಗಿದೆ.
ರಾತ್ರಿ ವೇಳೆಯಲ್ಲಿ ಅಪಘಾತ ಹೆಚ್ಚಳ: ಹಗಲಿನಲ್ಲಿ ದೂರದಿಂದಲೇ ಜಾನುವಾರುಗಳು ಕಂಡುಬರುವುದರಿಂದ ಸವಾರರು ದೂರದಿಂದಲೇ ವಾಹನಗಳ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದ್ರೆ ರಾತ್ರಿ ವೇಳೆಯಲ್ಲಿ ಜಾನುವಾರುಗಳು ಇರುವುದು ಕಾಣದ ಹಿನ್ನೆಲೆ ಸಾಕಷ್ಟು ಅಪಘಾತಗಳು ಸಹ ಸಂಭವಿಸಿವೆ. ಸಣ್ಣ ವಾಹನಗಳು ಡಿಕ್ಕಿಯಾದ ಸಂದರ್ಭದಲ್ಲಿ ಸವಾರರು ಗಾಯಗೊಳ್ಳುವುದರ ಜೊತೆಗೆ ದೊಡ್ಡ ವಾಹನಗಳು ಡಿಕ್ಕಿಯಾದ ಸಂದರ್ಭದಲ್ಲಿ ಜಾನುವಾರುಗಳೂ ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ.
ಇದರಿಂದಾಗಿ ವಾಹನ ಸವಾರರಿಗೆ ಜಾನುವಾರುಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಇದಕ್ಕೆ ಪರಿಹಾರವೇ ಇಲ್ಲ ಎನ್ನುವಂತಾಗಿತ್ತು. ಈ ನಿಟ್ಟಿನಲ್ಲಿ ಅಪಘಾತಗಳನ್ನು ತಪ್ಪಿಸಲು ಹಾಗೂ ಜಾನುವಾರುಗಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿಗೆ ಎರಡರಂತೆ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳೋದಾಗಿ ಪಶುಸಂಗೋಪನಾ ಸಚಿವರು ಭರವಸೆ ನೀಡಿದ್ದಾರೆ. ಇದರಿಂದ ಬಿಡಾಡಿ ದನಗಳಿಗೆ ಆಶ್ರಯ ದೊರೆಯುವುದರ ಜೊತೆಗೆ ಅವುಗಳಿಂದ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳಿಗೂ ಕಡಿವಾಣ ಹಾಕಿದಂತಾಗಲಿದೆ.
ಓದಿ: ಸಿಎಂ ಪುತ್ರ ವಿಜಯೇಂದ್ರಗೆ ಬಿಗ್ ರಿಲೀಫ್.. ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬಿಡಾಡಿ ದನಗಳಿಂದ ವಾಹನ ಸವಾರರನ್ನು ಎಚ್ಚರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾನುವಾರುಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸುವ ಕಾರ್ಯ ಸಹ ಮಾಡಿತ್ತು. ರಸ್ತೆಯಲ್ಲಿ ಕಾಣಸಿಗುವ ಜಾನುವಾರುಗಳ ಕೊಂಬು, ಕುತ್ತಿಗೆಗೆ ರೇಡಿಯಂ ರಿಫ್ಲೆಕ್ಟರ್‌ಗಳನ್ನ ಅಳವಡಿಸಿದ್ದು, ಇದರಿಂದ ರಾತ್ರಿ ವೇಳೆಯಲ್ಲೂ ವಾಹನಗಳ ಬೆಳಕಿಗೆ ಜಾನುವಾರುಗಳು ಇರುವುದು ತಿಳಿಯಲು ಅನುಕೂಲವಾಗುವಂತಾಗಿತ್ತು. ಆದ್ರೆ ಬಿಡಾಡಿ ದನಗಳ ಸಂಖ್ಯೆ ಹೆಚ್ಚಿಗೆ ಇದ್ದು, ಕೆಲವರು ತಾವು ಸಾಕಿರುವ ದನ, ಕರುಗಳನ್ನ ಸಹ ರಸ್ತೆಗೆ ಬಿಡುವುದರಿಂದ ಸಮಸ್ಯೆ ಪರಿಹಾರವಾಗಿರಲಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ಜಾನುವಾರುಗಳ ಕಳ್ಳತನಕ್ಕೂ ಸಹ ಇದು ದಾರಿಮಾಡಿಕೊಟ್ಟಿತ್ತು. ಇದೀಗ ಜಾನುವಾರುಗಳು ಹಾಗೂ ಸವಾರರ ರಕ್ಷಣೆಯ ದೃಷ್ಟಿಯಿಂದ ಗೋಶಾಲೆಗಳನ್ನ ನಿರ್ಮಿಸುವ ಯೋಜನೆ ರೂಪಿಸಿರುವುದಕ್ಕೆ ಸಾರ್ವಜನಿಕರಿಂದ ಸಹ ಮೆಚ್ಚುಗೆ ವ್ಯಕ್ತವಾಗಿದ್ದು, ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬರುವಂತಾಗಲಿ ಎಂದಿದ್ದಾರೆ.