ಕಾರವಾರ: ಆರು ತಿಂಗಳು ಕಳೆದರೂ ದುಡಿಮೆಗೆ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಬಿಎಸ್ಎನ್ಎಲ್ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಬಿಎಸ್ಎನ್ಎಲ್ ಹೊರಗುತ್ತಿಗೆ ನೌಕರರ ಸಂಘದ 20ಕ್ಕೂ ಅಧಿಕ ಹೊರಗುತ್ತಿಗೆ ನೌಕರರು ವೇತನ ತಡೆಹಿಡಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಆರು ತಿಂಗಳಿನಿಂದ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ. ನಮ್ಮನ್ನು ಕೆಲಸದಿಂದ ಕೈಬಿಡುವ ಹುನ್ನಾರ ನಡೆಸಲಾಗಿದೆ. ಆದರೆ ನಾವು ಗುತ್ತಿಗೆ ಕಾರ್ಮಿಕರಾಗಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದೀಗ ಏಕಾಏಕಿ ವೇತನ ನೀಡದೇ ಕೆಲಸದಿಂದ ತೆಗೆದುಹಾಕುವುದು ಸರಿಯಲ್ಲ ಎಂದರು.
ನಾವು ಆರು ತಿಂಗಳವರೆಗೆ ವೇತನಕ್ಕೆ ಕಾದಿದ್ದೇವೆ. ಇದೀಗ ಜೀವನ ನಡೆಸುವುದು ಸಹ ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಬಿಎಸ್ಎನ್ಎಲಲ್ನಿಂದ ನಮ್ಮನ್ನು ತೆಗೆದುಹಾಕಿದರೇ ನಮ್ಮ ಮುಂದಿನ ಜೀವನ ಏನು ಎಂಬುದು ತಿಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ಕಂಪನಿಯು ಹೊರಗುತ್ತಿಗೆ ನೌಕರರಿಗೆ ವೇತನ ನೀಡಿ ಕೆಲಸವನ್ನು ಖಾಯಂಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.