ಕಾರವಾರ (ಉತ್ತರಕನ್ನಡ): ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಜೈಲುವಾಸ ಅನುಭವಿಸಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್. ಇಂತಹ ಸಾವರ್ಕರ್ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಟೀಕಿಸಿದ್ದಾರೆ.
ಮುರುಡೇಶ್ವರದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಂಬೇಡ್ಕರ ಹೆಸರಿನಲ್ಲಿ ಅಧಿಕಾರವನ್ನು ಪಡೆದು ಕೊನೆಗೆ ಅವರಿಗೆ ಚುನಾವಣೆ ನಿಲ್ಲಲು ಅವಕಾಶ ನೀಡಲಿಲ್ಲ. ಮಾತ್ರವಲ್ಲದೆ ಅವರು ಮೃತರಾದ ಸಂದರ್ಭದಲ್ಲಿ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೂ ಸೂಕ್ತ ಬೆಂಬಲ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾಲದಲ್ಲಿ ಬಾಂಬ್ ತಯಾರಿಕೆ ಕಾರ್ಖಾನೆ : ಕುಟುಂಬದ ಯಾರೋ ಒಬ್ಬ ಸ್ವಾತಂತ್ರ್ಯ ಹೋರಾಟ ಮಾಡಿದ್ದನ್ನೇ ಇಂದಿಗೂ ಕಾಂಗ್ರೆಸ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಈಗ ಇಲ್ಲ. ಕಾಂಗ್ರೆಸ್ ಕಾಲದಲ್ಲಿ ಕೇವಲ ಬಾಂಬ್ ತಯಾರಿಕೆ ಕಾರ್ಖಾನೆಗಳು ಮಾತ್ರ ಸ್ಥಾಪನೆಯಾದವು. ಇದೇ ಕಾರಣಕ್ಕೆ ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್ ಒಡೆದು ಆಳುವ ಕೆಲಸ ಮಾಡುತ್ತಿದೆ : ಕಾಂಗ್ರೆಸ್ ಒಡೆದು ಆಳುವ ರಾಜಕಾರಣ ಮಾಡುತ್ತಿದೆ. ಇಸ್ಲಾಂನಲ್ಲಿ ಪೂಜೆ ಮಾಡುವ ವಿಧಾನವಿಲ್ಲದಿದ್ದರೂ ಟಿಪ್ಪು ಜಯಂತಿ ಆಚರಣೆಗೆ ತಂದ ಕಾಂಗ್ರೆಸ್, ಮತಾಂಧ ಟಿಪ್ಪುವಿನ ಜಯಂತಿ ಮಾಡುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡಿದೆ. ವೋಟ್ ಬ್ಯಾಂಕಿನ ರಾಜಕಾರಣಕ್ಕಾಗಿ ಭಯೋತ್ಪಾದಕರನ್ನೇ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದರು.
ಭಯೋತ್ಪಾದನೆ, ಡ್ರಗ್, ಸ್ಯಾಂಡ್ ಮಾಫಿಯಾಗಳಿಗೆ ಬೆಂಬಲ ಕೊಟ್ಟಿದ್ದು ಸಿದ್ಧರಾಮಯ್ಯ ಸರ್ಕಾರ. ಆದರೆ ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕಿದ್ದು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ. ಡಿಕೆಶಿಯವರು ಬೆಳಗಾವಿ ಕುಕ್ಕರ್, ಮಂಗಳೂರು ಕುಕ್ಕರ್ ಒಂದೇ ಅಂದುಕೊಂಡಿದ್ದಾರೆ. ದೇಶ ಒಡೆಯುವ ದೇಶ ವಿರೋಧಿಗಳಿಗೆ, ಭ್ರಷ್ಟರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬೆಂಬಲ ಕೊಡುತ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್ ಅದೊಂದು ಭಯೋತ್ಪಾದಕರ ಪಕ್ಷ ಎಂದು ಟೀಕಿಸಿದರು.
ಇದನ್ನೂ ಓದಿ : ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ.. ನಿಲುವಳಿ ಸೂಚನೆ ನೀಡಲು ಕಾಂಗ್ರೆಸ್ ತೀರ್ಮಾನ