ಶಿರಸಿ(ಉತ್ತರ ಕನ್ನಡ): ಸಿದ್ದರಾಮಯ್ಯನವರಿಗೆ ದಮ್ ಇದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ. ರಾಮ ಮಂದಿರ ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆ ಗುರುತು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಶಿರಸಿಯ ತಮ್ಮ ಮನೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಟುಗಳಿಲ್ಲದೇ ಕಾಂಗ್ರೆಸ್ಗೆ ಬದುಕಲು ಸಾಧ್ಯವಿಲ್ಲ. ಹಿಂದಿನಿಂದಲೂ ಅವರು ಬಹುಸಂಖ್ಯಾತ ರಾಜಕಾರಣ ಮಾಡಿಲ್ಲ. ಈ ನಿಟ್ಟಿನಲ್ಲಿ ಹಿಜಾಬ್ ನಿಷೇಧ ಹಿಂಪಡೆಯಲು ನಿರ್ಧರಿಸಿರುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದರು.
ಟಿಪ್ಪು ಈ ರಾಜ್ಯದ ಜನತೆಯೇ ತೆಗೆದಿಟ್ಟ ವ್ಯಕ್ತಿ. ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ ಆತ. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತದೆ ಎಂದರೆ ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಯಾರು ಬೇಕಾದ್ರೂ ಏನು ಬೇಕಾದ್ರೂ ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ನೀಡಿರುವುದು, ಮುಂದಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಗೆ ಕಾರಣವಾಗುತ್ತದೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ. ಒಂದು ಚೌಕಟ್ಟಿನ ಕಲ್ಪನೆ ಇಲ್ಲ ಎಂದಾದರೆ ಸರ್ಕಾರ ಇದೆ ಎಂದು ಅನಿಸುವುದಿಲ್ಲ. ಸಿದ್ದರಾಮಯ್ಯನವರ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯದು. ಕರ್ನಾಟಕದಲ್ಲಿ ಹಿಂದು ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ ಎಂದು ಹೆಗಡೆ ವಾಗ್ದಾಳಿ ನಡೆಸಿದರು.
ರಾಮ ಮಂದಿರ ಉದ್ಘಾಟನೆ ಬಗ್ಗೆ ಮಾತನಾಡುತ್ತಾ, ಇದು ಹಿಂದು ಸಮಾಜದ ವಿಜಯ. ಹಿಂದೂ ಸಮಾಜ ನಿರ್ಮಾಣದ ಮೊದಲ ಹೆಜ್ಜೆ ಗುರುತು. ಕಾನೂನು ತಿದ್ದುಪಡಿ ಮಾಡಿ ಭವ್ಯ ಮಂದಿರ ನಿರ್ಮಾಣಕ್ಕೆ ಕಾರಣಕರ್ತರಾಗಿರುವ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂತೆಗೆದುಕೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ
ಹಿಜಾಬ್ ನಿಷೇಧ ಹಿಂಪಡೆಯುವ ಸಿಎಂ ಹೇಳಿಕೆ ಸೃಷ್ಟಿಸಿದ ವಿವಾದ: ಶುಕ್ರವಾರ ಮೈಸೂರಿನ ನಂಜನಗೂಡಿನಲ್ಲಿ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಎಲ್ಲರೂ ಹಿಜಾಬ್ ಹಾಕಿಕೊಂಡು ಹೋಗಬಹುದು. ಆದೇಶ ಹಿಂಪಡೆಯಲು ಹೇಳಿದ್ದೇನೆ ಎಂದಿದ್ದರು. ಇದಾದ ನಂತರ ರಾಜ್ಯದಲ್ಲಿ ಶಿರವಸ್ತ್ರದ ಚರ್ಚೆ ಮುನ್ನಲೆಗೆ ಬಂದಿದೆ. ಶನಿವಾರ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹಿಜಾಬ್ ನಿಷೇಧ ವಾಪಸ್ ಪಡೆಯಲು ಸರ್ಕಾರ ಚಿಂತಿಸುತ್ತಿದೆ. ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್ ಪಡೆಯುವ ವಿಚಾರ: ಸರ್ಕಾರದ ಮಟ್ಟದಲ್ಲಿ ಚರ್ಚೆ ಎಂದ ಸಿಎಂ