ಶಿರಸಿ: ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠ ಹವ್ಯಕ ಸಮುದಾಯದ ಆರಾಧ್ಯ ಮಠವಾಗಿದ್ದು, ಯಲ್ಲಾಪುರ ಕ್ಷೇತ್ರದಲ್ಲಿ ತನ್ನದೇ ಆದ ಶಿಷ್ಯ ವರ್ಗ ಹೊಂದಿದೆ. ಇದೇ ಕಾರಣಕ್ಕಾಗಿ ಹವ್ಯಕ ಸಮುದಾಯಕ್ಕೆ ಸೇರಿರುವ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಕಳೆದ ರಾತ್ರಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಮಂತ್ರಾಕ್ಷತೆ ಪಡೆದುಕೊಂಡಿದ್ದಾರೆ.
ಯಲ್ಲಾಪುರ ಭಾಗದಲ್ಲಿ ಮಠದ ಪ್ರಭಾವ ಸಾಕಷ್ಟಿದ್ದು, ಮಠದ ಆಶೀರ್ವಾದ ಇದ್ದಲ್ಲಿ ಹವ್ಯಕ ಸಮುದಾಯದ ಮತದಾರರನ್ನು ತಮ್ಮತ್ತ ಸೆಳೆಯಬಹುದು ಎಂಬ ಉದ್ದೇಶದಿಂದ ಶ್ರೀಗಳನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಯಲ್ಲಾಪುರ ಕ್ಷೇತ್ರದ ಹವ್ಯಕ ಸಮುದಾಯದ ಮುಖಂಡರೂ ಸಹ ಹೆಬ್ಬಾರ್ಗೆ ಸಾಥ್ ನೀಡಿದ್ದಾರೆ.
ಕೇವಲ ಹೆಬ್ಬಾರ್ ಮಾತ್ರವಲ್ಲದೆ ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹಾಗೂ ಅಭ್ಯರ್ಥಿ ಭೀಮಣ್ಣ ನಾಯ್ಕ ಸಹ ಮಠಕ್ಕೆ ಭೇಟಿ ನೀಡಿ ಸಹಕಾರ ಕೇಳಿದ್ದಾರೆ ಎನ್ನಲಾಗಿದೆ. ಮಠದ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ ಎನ್ನಲಾಗುತ್ತಿದೆ.