ಕಾರವಾರ : ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವೆ ದೊಡ್ಡ ಕದನ ನಡೆದಿದೆ. ಒಂದಕ್ಕೊಂದು ಸೋಲೊಪ್ಪಿಕ್ಕೊಳ್ಳಲು ಸಿದ್ದವಿಲ್ಲದಂತೆ ಕಿತ್ತಾಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಾವುಗಳ ಕಾಳಗ ನಿಲ್ಲಿಸಿದ ಘಟನೆ ಕಾರವಾರದ ಹರಿದೇವ ನಗರದಲ್ಲಿಂದು ಸಂಜೆ ನಡೆದಿದೆ.
ಹರಿದೇವ ನಗರದಲ್ಲಿ ಇಂದು ಸಂಜೆ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ಸುಮಾರು 6 ಅಡಿ ಉದ್ದದ ಹೆಬ್ಬಾವು ಒಂದಕ್ಕೊಂದು ಸುತ್ತಿಕ್ಕೊಂಡು ಕಾಳಗ ನಡೆಸಿದ್ದವು. ಇದನ್ನು ಸ್ಥಳೀಯರು ಗಮನಿಸಿದ್ದು, ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಎರಡು ಕೂಡ ಕಾಳಗ ನಡೆಸಿ ನುಂಗಲು ಪ್ರಯತ್ನಿಸುತ್ತಿದ್ದರೂ ಕೂಡ ಸಾಧ್ಯವಾಗಿರಲಿಲ್ಲ.
ಹೆಬ್ಬಾವು ಕಾಳಿಂಗ ಸರ್ಪದ ತಲೆಯನ್ನು ತನ್ನ ದೇಹದಲ್ಲಿ ಬಂಧಿಯಾಗಿಸಿತ್ತು. ಇತ್ತ ಹೆಬ್ಬಾವಿಗೆ ಉದ್ದದ ಕಾಳಿಂಗನನ್ನು ನುಂಗಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಎರಡು ಹಾವುಗಳು ಕಾದಾಡಿ ಸಾವನ್ನಪ್ಪುವ ಸ್ಥಿತಿಯಲ್ಲಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಾವುಗಳನ್ನು ರಕ್ಷಿಸಿದ್ದರು.
ಇದನ್ನೂ ಓದಿ: ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿ ಜತೆ 1.20 ಕೋಟಿ ರೂ. ಗೆದ್ದ ಸಿದ್ದಾಪುರದ ದಿನೇಶ್
ಆದರೆ, ಕಾಳಿಂಗ ಸರ್ಪ ಹೆಬ್ಬಾವಿನ ಮೇಲೆ ತೀವ್ರ ದಾಳಿ ಮಾಡಿ ಕಚ್ಚಿದ್ದು, ಹೆಬ್ಬಾವಿನ ಸ್ಥಿತಿ ಗಂಭೀರವಾಗಿದೆ. ಬಳಿಕ ಕಾಳಿಂಗ ಕಾಡಿಗೆ ಹೋಗಿದ್ದು, ಹೆಬ್ಬಾವಿನ ಸ್ಥಿತಿ ನೋಡಿ ಕಾಡಿಗೆ ಬಿಡುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.