ಉತ್ತರ ಕನ್ನಡ(ಭಟ್ಕಳ): ದೇಶದಾದ್ಯಂತ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಇಲ್ಲಿನ ಭಟ್ಕಳದಲ್ಲಿ ಉತ್ತರ ಪ್ರದೇಶದ ಭೋಪಾಲ್ನ ಕಾರ್ಮಿಕರು ಸಿಲುಕಿದ್ದಾರೆ. ಹಾಗಾಗಿ ಭೋಪಾಲ್ನ ಜಿಲ್ಲಾಧಿಕಾರಿ ತೇಜಸ್ವಿ ನಾಯ್ಕ್ ಭಟ್ಕಳದ ಗಗನ ಕುಸುಮ ಫೌಂಡೇಶನ್ ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ.
ಭಟ್ಕಳದ ನಾಗಪ್ಪ ನಾಯ್ಕ ರಸ್ತೆಯ ಡಿ.ಪಿ ಕಾಲೊನಿಯಲ್ಲಿ ಯು.ಪಿ ಮೂಲದ ಕೂಲಿ ಕಾರ್ಮಿಕರು ವಾಸವಾಗಿದ್ದು. ಲಾಕ್‍ಡೌನನಿಂದಾಗಿ ನಿತ್ಯ ಬಳಕೆಯ ವಸ್ತುಗಳ ಕೊರತೆಯಿಂದ ಬಳಲುತ್ತಿದ್ದಾರೆ.
ಇದಿರಂದ ಭೋಪಾಲ್ ಹೆಲ್ಪ್ಲೈನ್ಗೆ ಕರೆ ಮಾಡಿ ತಮಗಾಗುತ್ತಿರುವ ಸಂಕಷ್ಟ ತೋಡಿಕೊಂಡಿದ್ದರು. ಲಾಕ್‍ಡೌನ್ ಹೇರಿಕೆಯಾಗಿದ್ದರಿಂದ ತಮಗೆ ದಿನನಿತ್ಯದ ಅಗತ್ಯ ವಸ್ತುಗಳು ದೊರೆಯದೆ ತಮ್ಮ ಕುಟುಂಬ ಸಂಕಷ್ಟದಲ್ಲಿದೆ. ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಭೋಪಾಲ್ ಜಿಲ್ಲೆಯ ಕಾರ್ಮಿಕರ ಕರೆಯನ್ನು ಗಂಭಿರವಾಗಿ ಪರಿಗಣಿಸಿದ ಭೋಪಾಲ್ ಜಿಲ್ಲಾಧಿಕಾರಿ ತೇಜಸ್ವಿ ನಾಯ್ಕ, ಗಗನ ಕುಸುಮ ಫೌಂಡೇಶನ್ನ ರಾಜ್ಯಾಧ್ಯಕ್ಷ ಭಟ್ಕಳ ಮೂಲದ ಸುರೇಶ ರಾಮಾ ನಾಯ್ಕ ಅವರಿಗೆ ಕರೆ ಮಾಡಿದ್ದಾರೆ.
ಕರೆಗೆ ಸ್ಪಂದಿಸಿದ ಸುರೇಶ ನಾಯ್ಕ ಹಾಗೂ ಮೋಹನ ನಾಯ್ಕ ಸಂಕಷ್ಟದಲ್ಲಿದ್ದ ಕಾರ್ಮಿಕರ ಮಾಹಿತಿ ಕಲೆಹಾಕಿ ಕೂಡಲೇ ಅಲ್ಲಿಗೆ ತೆರಳಿ 2 ತಿಂಗಳ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ಅಲ್ಲದೆ ಅವರಿಗೆ ಫೌಂಡೇಶನ್ ಸದಸ್ಯರು ಸಾಂತ್ವನ ಹೇಳಿ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ.