ಭಟ್ಕಳ: ತನ್ನ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ಯಾವುದೇ ಸಕಾರಣ ಇಲ್ಲದೇ, ಯಾವುದೇ ಪ್ರಕರಣವನ್ನೂ ದಾಖಲಿಸದೇ, ಕಾನೂನು ಬಾಹಿರವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಖಾಸಗಿ ದೂರಿನ ಮೇರೆಗೆ ಕೋರ್ಟ್ ಕಮಿಷನ್‍ನಿಂದ ವರದಿ ಪಡೆದ ಭಟ್ಕಳ ಜೆಎಮ್‍ಎಫ್‍ಸಿ ನ್ಯಾಯಾಲಯ, ಭಟ್ಕಳ ಶಹರ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದೆ.
ಈ ಸಂಬಂಧ ಕುಂದಾಪುರದ ವಕೀಲ ಎನ್.ಎಸ್.ಆರ್. ಭಟ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ತಾಲೂಕಿನ ನವಾಯತ ಕಾಲೋನಿಯ ಮಹ್ಮದ್ ಫರ್ಹಾನ್ ಶಾಬಂದ್ರಿ ಎಂಬುವವರು ಕಳೆದ ಜ. 7ರಂದು ಭಟ್ಕಳ ತಾಲೂಕಿನ ಸಿದ್ದೀಕ್ ಸ್ಟ್ರೀಟ್‍ನಲ್ಲಿ ಟಿಪ್ಪರ್ ವಾಹನಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು, ಯಾವುದೇ ಕಾರಣ ನೀಡದೆ ಎರಡೂ ಟಿಪ್ಪರ್ಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳ ಶಹರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಟಿಪ್ಪರ್ಗಳನ್ನು ತಮ್ಮ ಬಳಿಯೇ ಅಕ್ರಮವಾಗಿ ಇಟ್ಟುಕೊಂಡಿದ್ದು, ಈವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ತನಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಗುಜ್ಜರಕೆರೆ ಜಲಶುದ್ಧೀಕರಣಕ್ಕೆ 'ಆಕ್ಸಿಡೇಷನ್ ಪಾಂಡ್': ಜಿಲ್ಲಾಡಳಿತ ಚಿಂತನೆ
ಈ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಈ ಕುರಿತು ವರದಿ ನೀಡುವಂತೆ ಕೋರ್ಟ್ ಕಮಿಷನ್‍ನನ್ನು ನೇಮಿಸಿತ್ತು. ನಂತರ ಕಮಿಷನ್‍ನ ವಕೀಲರು ನೀಡಿದ ವರದಿಯನ್ನು ಪರಿಗಣಿಸಿ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದ್ದು, ಎರಡೂ ಟಿಪ್ಪರ್ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ತಿಳಿಸಿದೆ ಎಂದು ವಕೀಲರು ವಿವರಿಸಿದರು.