ಭಟ್ಕಳ: ಕಳೆದ ವರ್ಷ ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ಕಾಣೆಯಾಗಿದ್ದ ಬಾಲಕನೋರ್ವನನ್ನು ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿ ಪಾಲಕರಿಗೆ ಒಪ್ಪಿಸಿದ್ದಾರೆ.
ನಾಪತ್ತೆಯಾಗಿದ್ದ ಬಾಲಕ ಭಟ್ಕಳದ ತಂಜೀಂ ರಸ್ತೆಯ ಸಮೀಪದ ಇರ್ಷಾದ ಅಸ್ಗರ ಮೊಲ್ಲಾ ಎಂದು ತಿಳಿದು ಬಂದಿದೆ. ಈ ಬಾಲಕ ಕಳೆದ 2019ರ ಜೂನ್ 19ರಂದು ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು, ರೈಲು ಹತ್ತಿ ಮುಂಬೈಗೆ ಹೋಗಿದ್ದ. ಅಲ್ಲಿಂದ ಚೈಲ್ಡ್ ಡೆವಲಪ್ಮೆಂಟ್ ಕಮಿಟಿ ಸದಸ್ಯರು ಈತನನ್ನು ಚೈಲ್ಡ್ ಅಂಡ್ ಡೆವಲಪ್‍ಮೆಂಟ್ ಕಮಿಟಿ ಸ್ಕೂಲಿಗೆ ಒಪ್ಪಿದ್ದರು. ಶಾಲೆಯಲ್ಲಿ ಶಿಕ್ಷಕರು ಬೈದಿದ್ದರಿಂದ ಭಯಗೊಂಡು ಮನೆಗೆ ಬಂದಿರಲಿಲ್ಲ ಎಂದು ನಾಪತ್ತೆಯಾಗಿದ್ದ ಬಾಲಕ ಹೇಳಿದ್ದಾನೆ.
ಬಾಲಕನ ಪಾಲಕರು ಮಗ ನಾಪತ್ತೆಯಾದ ಕುರಿತು ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೆತ್ತಿಕೊಂಡ ಪಿಎಸ್ಐ ಕೆ.ಕುಸುಮಾಧರವರ ತಂಡ ಸತತ 6 ತಿಂಗಳಿಂದ ಮಂಗಳೂರು, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕೇರಳ ರಾಜ್ಯ, ಗೋವಾ ರಾಜ್ಯದಲ್ಲಿ ಹುಡುಕಾಟ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಬಾಲಕ ಪತ್ತೆಯಾಗಿದ್ದು, ಪಾಲಕರಿಗೆ ಒಪ್ಪಿಸಲಾಗಿದೆ.
ಇನ್ನು ಮಗ ಇರ್ಷಾದ ನಾಪತ್ತೆಯಾಗಿದ ದಿನದಿಂದ ಆತನಿಗಾಗಿ ಹುಡುಕಾಟ ನಡೆಸದ ದಿನವಿಲ್ಲ. ತಕ್ಷಣಕ್ಕೆ ಭಟ್ಕಳ ಪೊಲೀಸರಿಗೆ ತಿಳಿಸಿದ್ದು, ಅಂದಿನಿಂದ ಪೊಲೀಸರು ನನ್ನ ಮಗನನ್ನು ಹುಡುಕಾಟ ನಡೆಸಿ ಕೊನೆಗೂ ತಮಗೆ ಒಪ್ಪಿಸಿದ್ದಾರೆ. ಭಟ್ಕಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಬಾಲಕನ ತಂದೆ ತಿಳಿಸಿದರು.