ಭಟ್ಕಳ: ದುಬೈನಿಂದ ಭಟ್ಕಳಕ್ಕೆ ಬಂದವರಿಗೆ ತಾಲೂಕಾಡಳಿತದಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಅನ್ನು ನಿಗದಿಪಡಿಸಲಾಗಿತ್ತು. ಆದರೆ, ಅಲ್ಲಿ ಕ್ವಾರಂಟೈನ್ ಮಾಡುವುದನ್ನು ಸ್ಥಳೀಯರು ವಿರೋಧಿಸಿದ್ದು, ಸ್ಥಳಕ್ಕೆ ತಹಶೀಲ್ದಾರ ಎಸ್. ರವಿಚಂದ್ರ ಮತ್ತು ಸಿಪಿಐ ದಿವಾಕರ ಭೇಟಿ ನೀಡಿ ಸ್ಥಳಿಯರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.
ದುಬೈನಿಂದ, ಮಂಗಳೂರು ಮತ್ತೆ ಅಲ್ಲಿಂದ ಭಟ್ಕಳಕ್ಕೆ ಬಸ್ ಮೂಲಕ ಆಗಮಿಸಿದ 184 ಜನರಲ್ಲಿ ಸುಮಾರು 67 ಜನರಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಅಲ್ಲಿಯ ಸಂಪರ್ಕ ರಸ್ತೆಯನ್ನು ಬಂದ್ ಮಾಡಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಅದೇ ದಾರಿಯಲ್ಲಿ ಹಲವಾರು ಅಂಗಡಿಗಳು, ಮನೆಗಳು, ಸಂಸ್ಥೆಗಳು ಇದ್ದುದರಿಂದ ಸ್ಥಳೀಯರು ಸಂಚಾರ ನಿರ್ಬಂಧ ಕುರಿತು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈಗಾಗಲೇ ಲಾಕ್ ಡೌನ್ನಿಂದ ಸಾಕಷ್ಟು ಕಷ್ಟ ಅನುಭವಿಸಿದ ನಾವುಗಳು ಮತ್ತೆ ಈಗ ರಸ್ತೆ ಸಂಚಾರ ಬಂದ್ನಿಂದ ತೊಂದರೆ ಅನುಭವಿಸಬೇಕೆ ಎಂದು ತಾಲೂಕಾಡಳಿತದ ನಿರ್ಧಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಪರಿಸ್ಥಿತಿಯ ಗಂಭೀರತೆ ಅರಿತು ತಕ್ಷಣ ಸ್ಥಳಕ್ಕೆ ತಹಶೀಲ್ದಾರ ಎಸ್. ರವಿಚಂದ್ರ, ಸಿಪಿಐ ದಿನಕರ ಪಿ. ದೌಡಾಯಿಸಿ ಸ್ಥಳೀಯರನ್ನು ಸಮಾಧಾನ ಪಡಿಸಿದ್ದಾರೆ. ದುಬೈನಿಂದ ಬಂದು ಕ್ವಾರಂಟೈನಗೆ ಒಳಪಡುವವರಿಗೆ ಖಾಸಗಿ ಹೋಟೆಲ್ ನಿಗದಿ ಮಾಡಲಾಗಿದೆ. ಈ ಹಿನ್ನೆಲೆ ಅವರು ಬಂದು ಇಳಿಯುವ ವೇಳೆಯಷ್ಟೆ ಸಂಚಾರ ನಿರ್ಭಂಧಿಸಿದ್ದೇ ಹೊರತು ಆನಂತರ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆ ಅಥವಾ ನಿರ್ಭಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕ್ವಾರಂಟೈನ್‍ನಲ್ಲಿ ಇದ್ದವರು ಯಾವುದೇ ಕಾರಣಕ್ಕೂ ಹೊರಬರುವಂತಿಲ್ಲ. ಅವರನ್ನು ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಾರೆ. ಸ್ಥಳೀಯರಿಗೆ ಯಾವುದೇ ಆತಂಕ ಬೇಡ. ನೀವು ನಿರಾಳವಾಗಿರಿ ಎಂದು ಸಮಾಧಾನ ಪಡಿಸಿದರು. ಇದಾದ ನಂತರವೂ ಸ್ಥಳೀಯರು, ಶಾಸಕರು ಸೇರಿ ಜಿಲ್ಲಾಡಳಿತಕ್ಕೆ ಕ್ವಾರಂಟೈನ್ ಸ್ಥಳವನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿದ್ದಾರೆ.
ಹಿರಿಯ ಸಾಹಿತಿಗಳಾದ ಭಟ್ಕಳದ ಝಮಿರುಲ್ಲಾ ಷರೀಫ್ ಮಾತನಾಡಿ ‘ಇಲ್ಲಿ ಕ್ವಾರಂಟೈನ್ ಮಾಡುವ ಬದಲು ಜನವಸತಿ ವಿರಳವಿದ್ದ ಕಡೆ ಕ್ವಾರಂಟೈನ್ ಮಾಡಬಹುದಿತ್ತು. ಅದೇ ಕಟ್ಟಡದಲ್ಲಿ ಮಕ್ಕಳ ಕ್ಲಿನಿಕ್ ಇದ್ದು ಪ್ರತಿದಿನ ನೂರಾರು ಕಂದಮ್ಮಗಳು ಅಲ್ಲಿ ತಪಾಸಣೆಗೆ ಬರುತ್ತವೆ. ಅದೇ ಕಟ್ಟಡದ ಮೇಲೆ ಕ್ವಾರಂಟೈನ್ ನೀಡಿರುವದು ಜನರನ್ನು ಆತಂಕಗೊಳ್ಳುವಂತೆ ಮಾಡಿದೆ. ಇಲ್ಲಿನ ಸಾಂಸ್ಥಿಕ ಕ್ವಾರಂಟೈನ್ ಅನ್ನು ಸ್ಥಳಾಂತರ ಮಾಡುವುದು ಉತ್ತಮ ಎಂದರು