ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿ-66 ರ ಸಮೀಪದ ಖಾಸಗಿ ರೆಸಿಡೆನ್ಸಿಯೊಂದರಲ್ಲಿ ನಡೆದ ಕೊಲೆ ಪ್ರಕರಣ ಕುರಿತು ಯುವಕನ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ತಾಲೂಕಿನ ಪುರವರ್ಗದ ಮುಂಗಳಿಹೊಂಡ ನಿವಾಸಿ ಅಫಾನ್ ಜಪಾಲಿ(25) ಕೊಲೆಯಾಗಿರುವ ಯುವಕ. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಈತ ಸಂಬಂಧಿಕರ ಮದುವೆ ನಿಮಿತ್ತ ನಗರಕ್ಕೆ ಬಂದಾಗ ಈ ಪ್ರಕರಣ ನಡೆದಿದೆ.
ಮುಂಬೈಯಿಂದ ಬಂದಿದ್ದ ಯುವಕರನ್ನು ಸ್ನೇಹಿತರು ಕರೆಮಾಡಿ ಕರೆಯಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಫಾನನ್ನು ಕೊಂದು ಶವವನ್ನು ಬೇರೆಡೆ ಸಾಗಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಅದೇ ಸಮಯಕ್ಕೆ ಮೃತ ಯುವಕನ ತಮ್ಮ ಅಣ್ಣನನ್ನು ಹುಡುಕಿಕೊಂಡು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಗನನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನಾವು ಬಡವರು, ಹೊಟೆಲ್ ನಲ್ಲಿ ಕೆಲಸಮಾಡಿ ದುಡಿದು ಬದುಕು ಸಾಗಿಸುವವರು. ಹೆತ್ತು ಹೊತ್ತು ಸಾಕಿ ಸಲುಹಿದ ಮಗನನ್ನು ಯಾವ ರೀತಿಯಲ್ಲಿ ಕೊಲೆ ಮಾಡಿದ್ದಾರೊ ಅದೇ ರೀತಿಯಲ್ಲಿ ಅವರಿಗೂ ಶಿಕ್ಷೆಯಾಗಬೇಕೆಂದು ಮೃತ ಯುವಕನ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ಅಣ್ಣನ ಸ್ನೇಹಿತ ನನಗೆ ಕರೆ ಮಾಡಿ ಹೋಟೆಲ್ಗೆ ಕರೆಯಿಸಿದ್ದರು. ಅಲ್ಲಿಗೆ ನಾನು ಹೋದಾಗ ನನ್ನ ಮೇಲೆ ಅಲ್ಲಿರುವ ಇಬ್ಬರು ಹಲ್ಲೆ ಮಾಡಲು ಮುಂದಾದರು. ಆಗ ನಾನು ತಪ್ಪಿಸಿಕೊಂಡು ರೂಮಿನ ಕೆಲಕಡೆ ಬಂದು ನನ್ನ ಸ್ನೇಹಿತನ್ನು ಕರೆದುಕೊಂಡು ಹೋದೆ. ನಂತರ ರೂಮಿನ ಬಾಗಿಲನ್ನು ತೆರೆದು ನೋಡಿದಾಗ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆಗೈದು ಚೀಲದಲ್ಲಿ ಹಾಕಿದ್ದರು ಎಂದು ಮೃತ ಅಫಾನ್ನ ಸಹೋದ ನಬಿಲ್ ತಿಳಿಸಿದ್ದಾರೆ.