ಭಟ್ಕಳ: ತಾಲೂಕಿನ ಮಾವಳ್ಳಿ-2 ಗ್ರಾಮದ ಕೊಡ್ಸೂಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಠ್ಯೇತರ ಚಟುವಟಿಕೆಯ ಭಾಗವಾಗಿ 60 ಪರಿಸರ ಸ್ನೇಹಿ ಕುಂಡ ತಯಾರಿಸಿ ಹೊಸದೊಂದು ಪ್ರಯೋಗ ಮಾಡಿದ್ದಾರೆ.
ಮಾವಳ್ಳಿ-2 ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ರಾಮದಲ್ಲಿರುವ ಕೊಡ್ಸೂಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು 60 ಪರಿಸರ ಸ್ನೇಹಿ ಕುಂಡ ತಯಾರಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ. ಈ ಶಾಲೆಯಲ್ಲಿ 6 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಪ್ರಭಾರಿ ಮುಖ್ಯ ಶಿಕ್ಷಕ ಪರಮೇಶ್ವರ ಜಟ್ಟ ನಾಯ್ಕ ನೇತೃತ್ವದಲ್ಲಿ ತುಕಾರಾಮ ತಾಡುಕಟ್ಟಾ, ಶಾರದಾ ನಾಯ್ಕ, ಸುಧಾ ಅಶೋಕ ಆಚಾರಿ, ಮಂಜುನಾಥ ಶೇಟ ಹಾಗೂ ಧರ್ಮ ಕುಪ್ಪು ನಾಯ್ಕ ಅವರು ಶಾಲೆಯ ಶೈಕ್ಷಣಿಕ ಕಾರ್ಯಕ್ರಮದೊಂದಿಗೆ ಬಿಡುವಿನ ವೇಳೆಯಲ್ಲಿ ಈ ಪರಿಸರ ಸ್ನೇಹಿ ಕುಂಡವನ್ನು ಯೋಜನಾಬದ್ಧವಾಗಿ ತಯಾರಿಸಿದ್ದಾರೆ.
ಶಿಕ್ಷಕರು ವಿದ್ಯಾಗಮ ಶೈಕ್ಷಣಿಕ ಕಾರ್ಯಕ್ರಮವನ್ನು ನಿರ್ವಹಿಸುತ್ತಾ ಬಿಡುವಿನ ವೇಳೆ ಶಾಲೆಯ ‘ನಿಸರ್ಗ’ ಪರಿಸರ ಸಂಘದ ಅಡಿಯಲ್ಲಿ ವಿವಿಧ ಪರಿಸರ ಪೂರಕ ಚಟುವಟಿಕೆಗಳನ್ನು ಮಾಡುತಿದ್ದಾರೆ. ಅವುಗಳಲ್ಲಿ ಈ ಪರಿಸರ ಸ್ನೇಹಿ ಕುಂಡ ಕೂಡ ಒಂದು. ಮಾರುಕಟ್ಟೆಯಲ್ಲಿ ಈ ಕುಂಡಕ್ಕೆ 150ರಿಂದ 200 ರೂ. ಬೆಲೆಯಿದೆ. ಹೀಗಾಗಿ ಶಿಕ್ಷಕರೇ ಕುಂಡ ತಯಾರಿಕೆಗಿಳಿದ್ದು, ಕೇವಲ 50 ರೂ. ವ್ಯಯಿಸಿ ಕುಂಡಗಳನ್ನು ಸಿದ್ಧಪಡಿಸಿದ್ದಾರೆ. ಸರ್ಕಾರದಿಂದ ಪರಿಸರ ಸ್ನೇಹಿ ಸಂಘಕ್ಕೆ 5 ಸಾವಿರ ಅನುದಾನ ನೀಡಲಾಗಿದ್ದು, ಅದರಲ್ಲಿ 1 ಸಾವಿರ ರೂ. ಈ ಕುಂಡ ತಯಾರಿಕೆಗೆ ಬಳಸಿಕೊಂಡಿದ್ದು, 3 ಚೀಲ ಸಿಮೆಂಟ್ ಹಾಗೂ ಮರಳನ್ನು ದಾನಿಗಳ ಸಹಾಯದಿಂದ ಪಡೆದುಕೊಂಡಿದ್ದಾರೆ.
ಒಟ್ಟು 5 ತಿಂಗಳ ಕಾಲಾವಧಿಯಲ್ಲಿ ಶಿಕ್ಷಕರು ವಿವಿಧ ವಿನ್ಯಾಸದ ವಿವಿಧ ಆಕಾರದ ಕುಂಡ ಸಿದ್ಧಪಡಿಸಿದ್ದಾರೆ. ಇದುವರೆಗೆ ಸುಮಾರು 65 ಕುಂಡಗಳನ್ನು ಸಿದ್ಧಪಡಿಸಲಾಗಿದ್ದು, 119 ಕುಂಡಗಳನ್ನು ತಯಾರಿಸಿ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗೆ ಒಂದು ಕುಂಡ, ಗಿಡ ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಕುಂಡ ತಯಾರಿಕೆಯ ಬಳಿಕ, ಅದರಲ್ಲಿ ವಿವಿಧ ಬಗೆಯ ಔಷಧಿ ಸಸಿ, ತರಕಾರಿ ಗಿಡಗಳನ್ನು ನೆಟ್ಟು ಮಕ್ಕಳಿಗೆ ಮಾಹಿತಿ ಸಹಿತ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸ್ಥಳೀಯ ಔಷಧಿ ಸಸ್ಯಗಳನ್ನು ಬೆಳೆಸಿ, ಆರೋಗ್ಯಕರ ಶಾಲಾ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನು ಶಿಕ್ಷಕರು ಹೊಂದಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಕುಂಡಗಳಲ್ಲಿ ಔಷಧೀಯ ಸಸಿ, ತರಕಾರಿ ಗಿಡಗಳನ್ನು ಹಾಕಲಾಗಿದೆ. ಮುಂದಿನ 4-5 ತಿಂಗಳಲ್ಲಿ ಇದರ ಉಪಯೋಗವಾಗುವಂತೆ ಸಸಿ ಹಾಕಲಾಗಿದೆ.
ಸುಂದರ ಕೈತೋಟ, ಸಾವಯುವ ಗೊಬ್ಬರ:
‘ನಿಸರ್ಗ’ ಪರಿಸರ ಸಂಘದ ಅಡಿಯಲ್ಲಿ ಶಾಲೆಯ ಪಕ್ಕದಲ್ಲಿ ಸುಂದರ ಕೈತೋಟ ನಿರ್ಮಿಸಲಾಗಿದೆ. ಅಲ್ಪ ಜಾಗದಲ್ಲಿಯೇ ಬಹು ಬಗೆಯ ತರಕಾರಿ, ಸೊಪ್ಪು ಹಾಗೂ ಔಷಧೀಯ ಗಿಡ, ಬಾಳೆ, ಕಬ್ಬು, ಮೆಣಸಿನಕಾಯಿ ಗಿಡ, ಪಪ್ಪಾಯಿ ಗಿಡ, ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡಲಾಗ್ತಿದೆ. ಕೇವಲ ಬೆಳೆಯದೆ, ಕೈತೋಟದಲ್ಲಿ ಫಲ ಬಂದಂತಹ ತರಕಾರಿಗಳಾದ ಹೀರೆಕಾಯಿ, ಕುಂಬಳಕಾಯಿ, ಬದನೆಕಾಯಿ, ನವಿಲುಕೋಸು, ಹಸಲಂದೆ, ಬೆಂಡೆಕಾಯಿ, ಹಸಿಮೆಣಸಿನಕಾಯಿ, ಹರಗೆ ಸೊಪ್ಪು, ಬೀನ್ಸ್, ತೊಂಡೆಕಾಯಿ, ಮೂಲಂಗಿಯನ್ನು ಕಳೆದ ವರ್ಷದ ಆರಂಭದಲ್ಲಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಸಿಕೊಳ್ಳಲಾಗಿದೆ.
ಶಾಲೆಯ ಸುತ್ತಮುತ್ತಲು ಬಯಲು ಪ್ರದೇಶವಿದ್ದು, ಸಾಕಷ್ಟು ಜಾನುವಾರುಗಳು ಮೇಯಲು ಬರುತ್ತವೆ. ಇದರಿಂದ ದಿನಕ್ಕೆ 2-3 ಬುಟ್ಟಿ ಸಗಣಿ ಸಿಗುತ್ತಿದ್ದು, ಅದನ್ನು ಕೈ ತೋಟಕ್ಕೆ ಬಳಸಿಕೊಳ್ಳಲಾಗ್ತಿದೆ. ಜೊತೆಗೆ ಕೆಲವೊಂದು ಸೊಪ್ಪುಗಳನ್ನು ಸೇರಿಸಿ ಶಿಕ್ಷಕರೇ ಸಾವಯವ ಗೊಬ್ಬರ ತಯಾರಿಸಿ ಕೈತೋಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಕೋವಿಡ್ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಕುಂಡ ತಯಾರಿಕೆ ಮುಗಿಸಿ ಸಸಿಗಳೆಲ್ಲವೂ ಉತ್ತಮ ಹಂತಕ್ಕೆ ಬೆಳೆದು ಮಕ್ಕಳಿಗೆ ನೀಡಲು ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯ ಎಲ್ಲಾ ಶಿಕ್ಷಕರದ್ದಾಗಿದೆ. ಕಳೆದ ವರ್ಷ ಕೈತೋಟ ನಿರ್ಮಿಸಲಾಗಿದ್ದು, ಈ ವರ್ಷ ಕೋವಿಡ್ನಿಂದಾಗಿ ಸಾಧ್ಯವಾಗಿಲ್ಲ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ:
ಶಿಕ್ಷಕರ ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಪಾಲಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರು, ಬಿ.ಆರ್.ಸಿ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೇರ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.