ಭಟ್ಕಳ: ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರ ಪಟ್ಟಿಯನ್ನು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರವಿ ಎಲ್. ನಾಯ್ಕ ಘೋಷಣೆ ಮಾಡಿದರು.
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರ ಪಟ್ಟಿಯನ್ನು ಘೋಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಪದಾಧಿಕಾರಿಗಳು ಹಾಗೂ ಸದಸ್ಯರ ಹೆಸರಿನ ಜೊತೆಗೆ ಅವರ ಜವಾಬ್ದಾರಿಯ ಕುರಿತು ತಿಳಿಸಲಾಗಿದೆ. ಜಿಲ್ಲಾ ಉಸ್ತುವಾರಿಗಳು, ಬಿಜೆಪಿ ಜಿಲ್ಲಾಧ್ಯಕ್ಷರು, ಶಾಸಕರ ಗಮನಕ್ಕೂ ತರಲಾಗಿದೆ ಎಂದರು.
ಎಲ್ಲಾ ವರ್ಗಕ್ಕೂ ಸರ್ಕಾರದಿಂದ ಪರಿಹಾರ ಸಿಗುತ್ತಿದೆ. ಆದರೆ ಹಿಂದುಳಿದ ವರ್ಗಗಳನ್ನು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ನಮ್ಮದಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಿದ್ದೇವೆ. ಪಕ್ಷದಿಂದ ಕೇಂದ್ರ ಸರ್ಕಾರದ ಅವಧಿಯ ಕಾರ್ಯಗಳ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡುವುದು ಒಂದು ಹಂತಕ್ಕೆ ಮುಕ್ತಾಯಗೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ಮೋರ್ಚಾದ ಕಾರ್ಯ ಗಮನ ಸೆಳೆಯಬೇಕು. ಎಲ್ಲರನ್ನೊಳಗೊಂಡಂತೆ ಕೆಲಸ ಮಾಡಲಿದ್ದೇವೆ ಎಂದರು.