ಭಟ್ಕಳ : ತಾಲೂಕಿನ ಮುಂಡಳ್ಳಿಯ ಜೋಗಿಮನೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1ರಿಂದ 5ನೇ ತರಗತಿಯವರೆಗಿನ ಮಕ್ಕಳ ಆರಂಭಿಕ ಶಿಕ್ಷಣಕ್ಕೆ ಪೂರಕವಾಗಿದೆ.
ಮುಖ್ಯ ಶಿಕ್ಷಕ ಅರುಣ್ ಮೇಸ್ತಾ ಹಾಗೂ ಸತತ 3ನೇ ಬಾರಿಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗಣೇಶ ಗುಡಿಮನೆ ಅವರ ನಡುವಿನ ಉತ್ತಮ ಹೊಂದಾಣಿಕೆಯಿಂದ ಈ ಶಾಲೆ ಸಾಕಷ್ಟು ಬದಲಾವಣೆ ಕಾಣ್ತಿದೆ. 2002ರಲ್ಲಿ ಒಂದು ಚಿಕ್ಕ ಕೊಠಡಿಯಲ್ಲಿ ಆರಂಭಗೊಂಡ ಈ ಕಿರಿಯ ಪ್ರಾಥಮಿಕ ಶಾಲೆಯೂ ಈಗ ಬಹುವಾಗಿ ವಿಸ್ತರಣೆಗೊಂಡು ಎರಡು ಸುಂದರ ಕಟ್ಟಡಗಳನ್ನ ಹೊಂದಿದೆ.
ಸುಂದರ ಪರಿಸರದಲ್ಲಿ ಶಿಕ್ಷಣ ನೀಡಬೇಕೆಂಬ ಹಿನ್ನೆಲೆ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯಲು ಎಸ್‌ಡಿಎಂಸಿ ಅಷ್ಟೇ ಅಲ್ಲ, ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ, ಊರಿನವರ ಸಹಕಾರ ಸಿಕ್ಕಿದೆ. ಒಟ್ಟು 25 ಸಾವಿರ ರೂ. ವೆಚ್ಚ ಮಾಡಿ ಶಾಲೆಗೆ ಬಣ್ಣ ಬಳಿಯಲಾಗಿದೆ.
ಕೊರೊನಾದ ಬಳಿಕ ಜೂನ್ ತಿಂಗಳ ವೇಳೆ ಇನ್ನೇನು ಶಾಲೆ ಆರಂಭಗೊಳ್ಳಲಿದೆ ಅನ್ನೋ ವೇಳೆಗೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಶಾಲೆಯ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಮಾಡಿದ್ದರು. ಶಾಲಾ ಆರಂಭ ವಿಳಂಬ ಅಂತಾ ತಿಳಿದ ಮೇಲೆ ಮತ್ತೊಮ್ಮೆ ತಮ್ಮ ಶಾಲೆಯ ಸ್ವಚ್ಛತೆ ಮಾಡಿ ಸುಣ್ಣ ಬಣ್ಣ ಬಳಿಯಲು ಸಹಕರಿಸಿದ್ದಾರೆ.
ಈಗ ಸುಂದರ ಕೈತೋಟ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಪಂಚಾಯತ್ನಿಂದ ಶಾಲೆಯ ಎದುರಿಗೆ ಕಾಂಪೌಂಡ್ ಕಟ್ಟುವ ಕಾರ್ಯವೂ ನಡೆಯುತ್ತಿದೆ. ಶಾಲೆಯ ಹೊರ ಕಟ್ಟಡದ ಸುಂದರತೆಯ ಜೊತೆಗೆ ಕೊಠಡಿಯೊಳಗೆ ಮಕ್ಕಳ ಶಿಕ್ಷಣದ ಕಲಿಕೆಗೆ ಬೇಕಾದ ಉಪಯುಕ್ತ ಮಾಹಿತಿ ಸಂಪೂರ್ಣ ಗೋಡೆಯ ಮೇಲೆ ಬಿಡಿಸಲಾಗಿದೆ.
ಒಟ್ಟು 19 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಗೋಡೆಯ ಸುತ್ತಲು ಮತ್ತು ಗೋಡೆಯ ಮೇಲ್ಭಾಗ ಕಲಿಕೆಯ ಉದಾಹರಣೆಯ ಉಪಕರಣಗಳನ್ನು ತೂಗು ಹಾಕಲಾಗಿದೆ. ಗುಡ್ಡ ಪ್ರದೇಶದಲ್ಲಿದ್ರೂ ಸುತ್ತಲೂ ಗಿಡಗಳನ್ನು ಬೆಳೆಯಲಾಗಿದೆ.
ಇದು ಈ ಶಾಲೆಗೆ ಇನ್ನೊಂದು ಪೂರಕ ವಾತಾವರಣ. ಶಾಲೆಗೆ ತೆರಳಲು ರಸ್ತೆಯ ಸಂಪರ್ಕವಿಲ್ಲದ ಕಾರಣ ಶಾಲಾಭಿವೃದ್ಧಿ ಕಮಿಟಿ ಅವರ ಶ್ರಮದಿಂದ ಸಮರ್ಪಕ ರಸ್ತೆ ಸಂಪರ್ಕ ಮಾಡಲಾಗಿದೆ.