ಭಟ್ಕಳ (ಉ.ಕ): ತಾಲೂಕಿನ ಬೆಣಂದೂರು ಗ್ರಾಮದ ವ್ಯಕ್ತಿಯೋರ್ವನ ಮೇಲೆ ಹಾಡಹಗಲೇ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇಲ್ಲಿನ ಬೆಣಂದೂರು ನಿವಾಸಿ ಪದ್ಮಯ್ಯ ಜಟ್ಟಾ ನಾಯ್ಕ(44) ಅವರನ್ನು ಆ.14ರಂದು ಹಗಲಿನಲ್ಲೇ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಣಂದೂರು ನಿವಾಸಿ ಜಯಂತ ಬಲೀಂದ್ರ ನಾಯ್ಕ, ಮಂಜುನಾಥ ಬಲೀಂದ್ರ ನಾಯ್ಕ, ದೇವೇಂದ್ರ ಬಲೀಂದ್ರ ನಾಯ್ಕ, ಸುಬ್ರಹ್ಮಣ್ಯ ಬಲೀಂದ್ರ ನಾಯ್ಕ, ಬಲೀಂದ್ರ ಹೊನ್ನಪ್ಪ ನಾಯ್ಕ, ಮಹೇಶ ಜಟ್ಟಪ್ಪ ನಾಯ್ಕ, ಸುರೇಶ ಮಾದೇವ ನಾಯ್ಕ, ಸುನೀಲ್ ಮಾದೇವ ನಾಯ್ಕ ಎಂಬ ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಲ್ಲಿ ಓರ್ವ ಕೋವಿಡ್ ಸೋಂಕಿತನಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವವರ ಪತ್ತೆಗಾಗಿ ಉತ್ತರಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಯ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್ ಮಾರ್ಗದರ್ಶನದಲ್ಲಿ ಎಎಸ್ಪಿ ನಿಖಿಲ್ ಬಿ, ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ 3 ತಂಡ ರಚಿಸಲಾಗಿತ್ತು.
ತಂಡದ ಉಸ್ತುವಾರಿಯನ್ನು ಸಿಪಿಐ ದಿವಾಕರ ಪಿ.ವಹಿಸಿದ್ದರು. ಒಂದು ತಂಡವನ್ನು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಾಗೂ ಇನ್ನೊಂದು ತಂಡವನ್ನು ಬೆಳಗಾವಿಯ ಗೋಕಾಕ್ ತಾಲೂಕಿನ ಮೂಡಲಗಿಗೆ ಕಳುಹಿಸಲಾಗಿತ್ತು ಹಾಗೂ 3ನೇ ತಂಡ ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿಸಲ್ಪಟ್ಟ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.