ಕಾರವಾರ: ಟ್ಯೂಷನ್ನಿಂದ ಮನೆಗೆ ಮರಳುತ್ತಿದ್ದ ಆರು ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ದಾರುಣ ಘಟನೆ ಭಟ್ಕಳ ತಾಲೂಕಿನ ಹುರುಳಿಸಾಲ್ ಸಮೀಪದ ಕಾರಗದ್ದೆಯಲ್ಲಿ ಸೋಮವಾರ ನಡೆದಿದೆ.
ಖುಷಿ ಈಶ್ವರ ನಾಯ್ಕ (6) ಮೃತ ಮಗು. ಮನೆಯಿಂದ ಟ್ಯೂಷನ್ಗೆ ತೆರಳಿ ವಾಪಸ್ಸಾಗುತ್ತಿದ್ದ ಮಗು ಗದ್ದೆಯ ಬೇಲಿಗೆ ಹಾಕಿದ್ದ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ. ಈ ವರ್ಷ ಒಂದನೇ ತರಗತಿಗೆ ದಾಖಲಾಗಿದ್ದಳು.
ಪ್ರಾಣಿಗಳು ಕಾಂಪೌಂಡ್‌ಗೆ ಬರದಂತೆ ತಡೆಯಲು ಐಬಾಕ್ಸ್ ಬ್ಯಾಟರಿ ತಂತಿಯನ್ನು ಅಳವಡಿಸಲಾಗಿತ್ತು. ಆದರೆ ವಿದ್ಯುತ್ ನೇರವಾಗಿ ಹರಿಸಿದ್ದರೇ ಅಥವಾ ಬ್ಯಾಟರಿಯಿಂದ ವಿದ್ಯುತ್ ಹರಿದು ಮಗು ಸಾವನ್ನಪ್ಪಿದೆಯೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಮಗುವನ್ನು ಮರಣೋತ್ತರ ಪರೀಕ್ಷೆಗೆ ಭಟ್ಕಳದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಕರಣ ಭಟ್ಕಳ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.