ಶಿರಸಿ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಉಕ್ಕಿ ಹರಿಯುತ್ತಿರುವ ವರದಾ ನದಿ ಹಾಗೂ ಗುಡ್ನಾಪುರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಗೆ ಒಳಪಡುವ ಎರಡೂ ನೀರಿನ ಮೂಲಗಳಲ್ಲಿ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹಣೆಯಾಗಿದ್ದು, ಸಂಪ್ರದಾಯದಂತೆ ಸ್ಥಳಕ್ಕೆ ಭೇಟಿ ನೀಡಿ ಬಾಗಿನ ನೀಡಿದರು. ಗುಡ್ನಾಪುರದ ಬಂಗಾರೇಶ್ವರ ದೇವರು ಹಾಗೂ ವರದೆಗೆ ಪೂಜೆ ಸಲ್ಲಿಸಿ, ಕೃಷಿ ಸಮೃದ್ಧಿಗೆ ಬೇಡಿಕೊಂಡರು.
ನಂತರ ಮಾತನಾಡಿದ ಸಚಿವ ಹೆಬ್ಬಾರ್, ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ವರದೆ ಮತ್ತು ಗುಡ್ನಾಪುರಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿ, ಶ್ರೇಯಸ್ಸಿಗೆ ಬೇಡಿಕೊಳ್ಳಲಾಗಿದೆ. ಈ ವರ್ಷ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದ್ದು, ಎರಡು ಜನರ ಪ್ರಾಣ ಹಾನಿಯಾಗಿದೆ. ಅವರ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗಿದ್ದು, ವಿವಿಧ ಹಾನಿಗಳಿಗೂ ಪರಿಹಾರ ನೀಡುವ ಕಾರ್ಯ ಸಾಗಿದೆ ಎಂದರು.