ಭಟ್ಕಳ: ಮೈತುಂಬಾ ಸಾಲ ಮಾಡಿಕೊಂಡಿದ್ದ ರಿಕ್ಷಾ ಚಾಲಕನೊಬ್ಬ ಇಲ್ಲಿನ ವೆಂಕಟಾಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಶಿರಾಲಿ ನಿವಾಸಿ ಗಣೇಶ ದೇವೆಂದ್ರ ಶಿರಾಲಿ(38) ಸಾವಿಗೀಡಾದ ವ್ಯಕ್ತಿ. ಇವರು ಮನೆ ಕಟ್ಟುವ ಸಲುವಾಗಿ ಕೆಲವು ಬ್ಯಾಂಕುಗಳಲ್ಲಿ ಸಾಲ ಮಾಡಿದ್ದರಂತೆ. ಜೊತೆಗೆ ತಾವು ನಡೆಸುತ್ತಿದ್ದ ಆಟೋ ರಿಕ್ಷಾವನ್ನೂ ಸಾಲದಲ್ಲೇ ಖರೀದಿಸಿದ್ದರು ಎಂಬ ಮಾಹಿತಿ ದೊರೆತಿದೆ.
ಮನೆಯಲ್ಲಿ ಸೋಲಾರ್ ಜೋಡಣೆ ಮಾಡಲು 6,000 ರೂ ಬೇಕೆಂದು ಹೆಂಡತಿಯ ಹತ್ತಿರ ಗಣೇಶ ಹೇಳಿದ್ದರು. ಈ ವಿಷಯಕ್ಕೆ ಪತ್ನಿಯ ಜೊತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದಾರೆ. ಬಳಿಕ ಹೆಂಡತಿಗೆ ಫೋನ್ ಮಾಡಿ ತಾನು ಸಾಯುತ್ತೇನೆ ಅಂತಾ ಹೇಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಗಣೇಶ, ವೆಂಕಟಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಮೃತನ ಪತ್ನಿ ನಾಗರತ್ನ ಗಣೇಶ ಶಿರಾಲಿ ಗ್ರಾಮೀಣ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ದೂರು ದಾಖಲಿಸಿಗೊಂಡ ಪಿ.ಎಸ್.ಐ ಭರತ, ವೆಂಕಟಾಪುರ ನದಿಯಲ್ಲಿ ತೇಲುತ್ತಿರುವ ಶವವನ್ನು ಸಾರ್ವಜನಿಕ ಸಹಾಯದಿಂದ ಮೇಲಕ್ಕೆತ್ತಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಚಾಲಕ ಗಣೇಶ ನಿಧನಕ್ಕೆ ಶಿರಾಲಿ ಭಾಗದ ಆಟೋ ಚಾಲಕರು ಸಂಪೂರ್ಣ ಬಂದ್ ಮಾಡಿ ಸಂತಾಪ ಸೂಚಿಸಿದರು.