ಭಟ್ಕಳ(ಉತ್ತರ ಕನ್ನಡ): ಭಟ್ಕಳ ಮಾರ್ಕೆಟ್ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುವಾಗ ಜೀಪ್ ಅಡ್ಡಗಟ್ಟಿ ಕಲ್ಲಿನಿಂದ ವಾಹನದ ಗ್ಲಾಸ್ ಒಡೆದಿರುವ ಘಟನೆ ತಡ ರಾತ್ರಿ ನಡೆದಿದೆ. ವಾಹನದ ಮೇಲೆ ಕಲ್ಲು ತೂರಾಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಭಟ್ಕಳ ನ್ಯಾಯಾಲಯವು ಮೇ 4ರವರೆಗೆ ಬಂಧನ ವಿಸ್ತರಿಸಿ ಆದೇಶಿಸಿದೆ. ಆರೋಪಿಗಳನ್ನು ಚಂದ್ರು ಸೋಮಯ್ಯ ಗೊಂಡ (28), ಮೊಹ್ಮದ್ ಇಮ್ರಾನ್ ಶೇಖ್ (35), ರವೀಂದ್ರ ಶಂಕರ ನಾಯ್ಕ (32), ಇಸ್ಮಾಯಿಲ್ (26), ಸೈಯದ್ ಸಲೀಂ (31), ಮಹ್ಮದ್ ಫೈಜಾನ್ ಅಬ್ದುಲ್ ಅಜೀಂ (20) ಹಾಗೂ ಮೊಹಮ್ಮದ್ ಸದ್ದಾಂ (24) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ವಿಷಯವಾಗಿ ಭಟ್ಕಳದ ಮುಖ್ಯ ರಸ್ತೆಯ ಮುಸ್ಬಾ ಕ್ರಾಸ್ ಸಮೀಪದ ಅಪೊಲೊ ಫಾರ್ಮಸಿ ಎದುರಿಗೆ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೇಳಲು ಹೋಗಿದ್ದಾರೆ. ಆಗ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತ ಏರು ಧ್ವನಿಯಲ್ಲಿ ರಂಪಾಟ ಮಾಡಲು ಪ್ರಾರಂಭಿಸಿದ್ದರು. ಆಗ ಪೊಲೀಸರು ಇವರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕರೆದುಕೊಂಡಲು ಹೋಗಲು ಮುಂದಾಗಿದ್ದಾರೆ. ಆಗ ಅಲ್ಲಿದ್ದ ಇನ್ನುಳಿದವರು ಪೊಲೀಸ್ ಜೀಪ್‌ನ್ನು ಅಡ್ಡಗಟ್ಟಿ ಗಾಜನ್ನು ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಆತಂಕವನ್ನುಂಟು ಮಾಡಿದ್ದಲ್ಲದೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಗುರುವಾರ ತಡರಾತ್ರಿ ನಾಲ್ವರು ಹಾಗೂ ಶುಕ್ರವಾರ ಬೆಳಗ್ಗೆ ಮೂವರು ಸೇರಿ ಒಟ್ಟೂ 7 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಭಟ್ಕಳ ನ್ಯಾಯಾಲಯವು ಮೇ 4ರ ವರೆಗೆ ಬಂಧನ ವಿಸ್ತರಿಸಿ ಆದೇಶ ಹೊರಡಿಸಿದೆ.
ಘಟನೆ ಹಿನ್ನೆಲೆ ಭಟ್ಕಳಕ್ಕೆ ಎಡಿಷನಲ್ ಎಸ್ಪಿ ಸಿ.ಟಿ ಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಸ್ ಪ್ರತಿಕ್ರಿಯಿಸಿದ್ದು, 'ಚುನಾವಣೆ ಹಿನ್ನೆಲೆ ಈ ಬಾರಿ ಮಾರ್ಕೆಟ್ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ನಿನ್ನೆ ನಡೆದ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇಂದು ರಾತ್ರಿಯವರೆಗೆ ಮಾರ್ಕೆಟ್ ನಡೆಸಬೇಕೋ ಅಥವಾ ಬೇಡವೋ ಎಂಬುವುದನ್ನು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗುವುದು' ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಮಾತನಾಡಿ, 'ಯುವತಿಯೊಂದಿಗೆ ಯುವಕ ಅನುಚಿತವಾಗಿ ವರ್ತಿಸಿದ್ದಾನೆಂಬ ಕಾರಣಕ್ಕೆ ಗಲಾಟೆ ನಡೆದಿದೆ. ಪೊಲೀಸರು ಆ ಯುವಕನನ್ನು ಜೀಪಿನಲ್ಲಿ ಕರೆದುಕೊಂಡು ಬರುವ ವೇಳೆ ಆತನನ್ನ ತಮ್ಮ ವಶಕ್ಕೆ ಕೊಡಿ ಎಂದು ಗಲಾಟೆ ನಡೆಸಲಾಗಿತ್ತು. ಇದೊಂದು ಸಣ್ಣ ಘಟನೆ. ಇದಕ್ಕೆ ಸಂಬಂಧಿಸಿದಂತೆ ದೊಂಬಿ ಪ್ರಕರಣ ದಾಖಲಾಗಿದ್ದು, ಏಳು ಮಂದಿಯನ್ನು ಬಂಧಿಸಿದ್ದೇವೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಗ್ರೆನೇಡ್ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಉಗ್ರರ ಬೇಟೆಗೆ ಕಾರ್ಯಾಚರಣೆ