ಕಾರವಾರ: ಗಾಳಿ ಮಳೆಗೆ ಹಾರಿಹೋದ ಮೇಲ್ಛಾವಣಿಯಿಂದಾಗಿ ಸೂರು ಕಳೆದುಕೊಂಡಿದ್ದ ವೃದ್ಧೆಯೊಬ್ಬರ ಸಂಕಷ್ಟಕ್ಕೆ ಮಿಡಿದ ಕಾರವಾರ ಉಪವಿಭಾಗಾಧಿಕಾರಿ ತಕ್ಷಣ ಮನೆ ರಿಪೇರಿ ಮಾಡಿಸಿ ಸಿಗಬೇಕಾದ ವಿವಿಧ ಸೌಲಭ್ಯಗಳನ್ನು ಕೊಡಿಸುವ ಮೂಲಕ ಕರ್ತವ್ಯನಿಷ್ಠೆ ತೋರಿದ್ದಾರೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಘಾಡಸಾಯಿಯ ವೃದ್ಧೆ ಗೋಪಿಕಾ ಗಣೇಶ ಗುನಗಿರವರ ಮನೆ ಮೇಲ್ಛಾವಣಿ ಜೂ.17 ರಂದು ಹಾರಿ ಹೋಗಿ ಸೂರೆ ಇಲ್ಲದಂತಾಗಿತ್ತು. ಅಲ್ಲದೆ ಮಳೆ ವಿಪರೀತವಾಗಿ ಸುರಿಯುತ್ತಿದ್ದ ಕಾರಣ ಇರುವ ಗೋಡೆ ಸಹ ಕುಸಿದುಬೀಳುವ ಆತಂಕ ಎದುರಾಗಿತ್ತು. ಈ ಬಗ್ಗೆ ಮಾಹಿತಿ ಪಡೆದು ಪರಿಶೀಲನೆಗೆ ತೆರಳಿದ್ದ ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ವೃದ್ಧೆಯ ಕಷ್ಟಕ್ಕೆ ನೆರವಾಗಿದ್ದಾರೆ.
ಹಾನಿಯಾದ ಮನೆಯ ಪರಿಶೀಲನೆ ನಡೆಸಿದ ಬಳಿಕ ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಿನ್ನರ ಅವರನ್ನು ಸ್ಥಳಕ್ಕೆ ಕರೆಸಿ ಹಾನಿಯಾದ ಮನೆಯ ಮೇಲ್ಛಾವಣಿಯನ್ನು ತುರ್ತಾಗಿ ರಿಪೇರಿ ಮಾಡಿಸುವಂತೆ ಸೂಚಿಸಿದ್ದಾರೆ.
ಜೊತೆಗೆ ವೃದ್ಧೆಗೆ ಸಂಧ್ಯಾ ಸುರಕ್ಷಾ ಪಿಂಚಣಿ ಸರಿಯಾಗಿ ತಲುಪದ ಬಗ್ಗೆ ಮಾಹಿತಿ ಪಡೆದ ಅವರು ಕೂಡಲೇ ಪಿಂಚಣಿ ದೊರೆಯುವಂತೆ ಮಾಡಲು ಕ್ರಮಕೈಗೊಳ್ಳಲು ಸೂಚಿಸಿದರು. ಅಲ್ಲದೆ ವೃದ್ಧೆ ಗೋಪಿಕಾ ಒಬ್ಬಂಟಿಯಾಗಿರುವುದರಿಂದ ಕೂಡಲೇ ಪಡಿತರ ಕಿಟ್ ವಿತರಿಸಲು ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಹಾನಿಗೊಳಗಾದ ಮನೆಗೆ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ತಹಶೀಲ್ದಾರರಿಗೆ ಸೂಚಿಸಿದರು.
ವೃದ್ಧೆಯ ಮನೆ ಹಿಂದೆ ವಿದ್ಯುತ್ ಕಂಬವೊಂದು ಬೀಳುವ ಸ್ಥಿತಿಯಲ್ಲಿರುವುದನ್ನು ತಿಳಿದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿ ಕೂಡಲೇ ದುರಸ್ತಿ ಪಡಿಸುವ ಮೂಲಕ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ ಕಂದಾಯ ನಿರೀಕ್ಷಕಿ ವಿದ್ಯಾಶ್ರೀ ಚಂದರಗಿ.