ಕಾರವಾರ: ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಸೋಮವಾರ ಶುಭ ದಿನದ ಹಿನ್ನೆಲೆ ಆರು ಕ್ಷೇತ್ರಗಳಲ್ಲಿ ಒಟ್ಟು 17 ಅಭ್ಯರ್ಥಿಗಳಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾರವಾರದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಕೋಡಿಭಾಗದ ಖಾಪ್ರಿ ದೇವರ ದೇವಸ್ಥಾನದಲ್ಲಿ ಪತ್ನಿ ಹಾಗೂ ಬೆಂಬಲಿಗರೊಂದಿಗೆ ತೆರಳಿ ಬಿ ಫಾರಂ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸುವ ಮೂಲಕ ಆಗಮಿಸಿ ಒಟ್ಟು 3 ನಾಮಪತ್ರ ಸಲ್ಲಿಸಿದ್ದು ಈ ಬಾರಿ ಮತದಾರರು ಹೆಚ್ಚಿನ ಬೆಂಬಲದಿಂದ ಗೆಲ್ಲಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕೂಡ ನಗರದ ಮಾಲಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅದೇ ಮೈದಾನದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸಾಥ್ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಚಿಂತನೆ ಹಾಗೂ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿರುವ ಸಾವಿರಾರು ಕೋಟಿ ಅನುದಾನದೊಂದ ಮತ್ತೊಮ್ಮೆ ಜನ ಆಯ್ಕೆ ಮಾಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದ್ದಾರೆ.
![candidates filed nomination in Uttara Kannada](https://etvbharatimages.akamaized.net/etvbharat/prod-images/18281052_thumbnew.jpg)
ಗಂಗಾಧರ ಭಟ್ ನಾಮಪತ್ರ ಸಲ್ಲಿಕೆ: ಕಾರವಾರದಲ್ಲಿ ಬಿಜೆಪಿ ಬಂಡಾಯ ಸ್ವತಂತ್ರ ಅಭ್ಯರ್ಥಿಯಾಗಿ ಗಂಗಾಧರ ಭಟ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮಗೆ ರಾಜ್ಯ ನಾಯಕರು ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿ ಇದೀಗ ಬೇರೆಯವರಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನಾಯಕ ಮಂಗೇಶ ನಾಯ್ಕ ನಾಮಪತ್ರ ಸಲ್ಲಿಸಿದ್ದಾರೆ.
ಕುಮಟಾ ಕ್ಷೇತ್ರದಲ್ಲಿ.. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ 2 ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಾಥ್ ನೀಡಿದ್ದರು. ಬಳಿಕ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಪಟ್ಟಣದ ಗಿಬ್ ಸರ್ಕಲ್‌ನಿಂದ ಇನ್ನೂರು ಮಂದಿ ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲಿ ಆಗಮಿಸಿ 2 ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕಿ ಶಾರದಾ ಶೆಟ್ಟಿ ಬೆಂಬಲಿಗರ ಅಭಿಪ್ರಾಯದಂತೆ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
![candidates filed nomination in Uttara Kannada](https://etvbharatimages.akamaized.net/etvbharat/prod-images/18281052_thumb.jpg)
ಭಟ್ಕಳ ಕ್ಷೇತ್ರದಲ್ಲಿ.. ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಪತ್ನಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಜತೆಗೆ ಉತ್ತಮ ಪ್ರಜಾಕೀಯ ಪಕ್ಷದಿಂದ ಯೊಗೇಶ ನಾಯ್ಕ, ಪಕ್ಷೇತರರಾಗಿ ಮೊಹಮ್ಮದ್ ಜಬ್ರುದ್ ಖತೀಬ್, ನಾಮಪತ್ರ ಸಲ್ಲಿಸಿದ್ದಾರೆ.
ಹಳಿಯಾಳದಲ್ಲಿ.. ಕಾಂಗ್ರೆಸ್‌ನಿಂದ ಆರ್.ವಿ. ದೇಶಪಾಂಡೆ 4 ನಾಮಪತ್ರ, ಬಿಜೆಪಿಯಿಂದ ಸುನೀಲ್ ಹೆಗಡೆ 2 ಹಾಗೂ ಅವರ ಪತ್ನಿ ಸುವರ್ಣ ಹೆಗಡೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಯಲ್ಲಾಪುರದಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಪಾಟೀಲ್ ಹಾಗೂ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ ಭೀಮಣ್ಣ ಬನ್ಸೊಡೆ ಮತ್ತು ಶಿರಸಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ 3 ನಾಮಪತ್ರ, ಆಮ್ ಆದ್ಮಿ ಪಾರ್ಟಿಯಿಂದ ಹಿತೇಂದ್ರ ನಾಯ್ಕ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೇ ಚುನಾವಣಾ ಕಣಕ್ಕೆ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡುವ ಮೂಲಕ ಅಧಿಕೃತವಾಗಿ ಧುಮುಕಿದ್ದಾರೆ.
ಇದನ್ನೂ ಓದಿ: ನಾಮಪತ್ರಗಳ ಮಹಾಪೂರ: ಬೃಹತ್ ಮೆರವಣಿಗೆ ಮೂಲಕ ಘಟಾನುಘಟಿಗಳಿಂದ ಉಮೇದುವಾರಿಕೆ ಸಲ್ಲಿಕೆ