ಕಾರವಾರ: ಅಕ್ರಮವಾಗಿ ವಿದೇಶಿ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಾರವಾರ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ ಅಂದಾಜು 80ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಆಝಾದ್ ನಗರದ ಸಿರಾಜ್ ಕತ್ತಾರ್ ಹಾಗೂ ಅಬ್ದುಲ್ ನಜೀರ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಇಂಗ್ಲೆಂಡ್, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ 10 ದೇಶಗಳ ಕರೆನ್ಸಿಗಳನ್ನು ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಕಾರವಾರ ನಗರ ಠಾಣೆಯ ಪಿಎಸ್‌ಐ ಸಂತೋಷ್ ಎಂ ಸಾರಿಗೆ ಬಸ್‌ನಲ್ಲಿ ಭಟ್ಕಳಕ್ಕೆ ತೆರಳುತ್ತಿದ್ದ ಇಬ್ಬರನ್ನೂ ಕಾರವಾರದ ಸುಭಾಷ್ ವೃತ್ತದ ಬಳಿ ವಶಕ್ಕೆ ಪಡೆದಿದ್ದಾರೆ. ಡಿವೈಎಸ್‌ಪಿ ಶಂಕರ್ ಮಾರಿಹಾಳ ಅವರು ವಿಚಾರಣೆ ನಡೆಸಿ, ಕೆಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಪ್ರಕರಣವನ್ನು ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಪೊಲೀಸರು ಹಸ್ತಾಂತರಿಸಿದ್ದು, ಅವರೇ ವಿಚಾರಣೆಯನ್ನು ಕೈಗೊಳ್ಳಲಿದ್ದಾರೆ. ಹೆಚ್ಚಿನ ಮೊತ್ತದ ಹಾಗೂ ವಿದೇಶಿ ಹಣ ಆಗಿರುವುದರಿಂದ ಪ್ರಕರಣವನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.