ಶಿರಸಿ: ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕವಾಗಿ ಹಿಂದುಳಿದ ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿ. ಬ್ರಾಹ್ಮಣ ಸಮುದಾಯವನ್ನು ಸೇರಿಸಿದ ಕರಡನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಸೂಕ್ತ ಸೌಲಭ್ಯ ನೀಡಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಹೇಳಿದರು.
ನಗರದ ರಾಘವೇಂದ್ರ ಮಠದಲ್ಲಿ ಮಾತನಾಡಿದ ಅವರು, 144 ಜಾತಿಗಳಿಗೆ ಶೇ.10ರಷ್ಟು ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಕೆಲ ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದಲ್ಲಿಯೂ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೆ ಅದರ ಕರಡು ತಯಾರಾಗಿದ್ದು, ಅದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸಿದ್ಧವಾಗಿದೆ. ಹಾಗಾಗಿ ಮುಖ್ಯಮಂತ್ರಿ ಶೀಘ್ರದಲ್ಲಿ ಅದನ್ನು ಮಂಡಿಸುವ ಜತೆ ಸುಗ್ರೀವಾಜ್ಞೆ ಹೊರಡಿಸಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದರು.
ಪ್ರಸಕ್ತ ವರ್ಷ 4 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಲೇಜುಗಳಿಗೆ ತೆರಳುವ ಸಮುದಾಯದ ಬಡ ಪ್ರತಿಭಾವಂತ ಮಕ್ಕಳ ಫೀ ತುಂಬುವುದು, ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡುವುದು, 150 ಅರ್ಹ ಅಭ್ಯರ್ಥಿಗಳಿಗೆ ದೆಹಲಿಯಲ್ಲಿ ಐಎಎಸ್ ತರಬೇತಿ ಕೊಡಿಸುವುದು ಹಾಗೂ ಸಣ್ಣ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಲು ಕ್ರಮವಹಿಸಲಾಗುತ್ತಿದೆ.
ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಸಾಂದೀಪನಿ ಶಿಷ್ಯವೇತನ, ವೇದ, ಸಂಸ್ಕೃತ, ಆಮಗ, ಆಗಮಿಕ ಹಾಗೂ ವಿದ್ವಾಂಸರಿಗೆ ಆಚಾರ್ಯತ್ರಯ ಶಿಷ್ಯವೇತನ, ಸಾಧಕರಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಕೊಡಲು ಮಂಡಳಿ ಕ್ರಮಕೈಗೊಂಡಿದೆ. ಸನ್ನಿಧಿ ಯೋಜನೆ, ಕೌಶಲ್ಯಾಭಿವೃದ್ಧಿ ಯೋಜನೆ, ಸ್ವಸಹಾಯ ಸಂಘಗಳ ಸ್ಥಾಪನೆ, ಅನ್ನದಾತ ಯೋಜನೆ ಜತೆ ಸಾಮಾಜಿಕ ಯೋಜನೆಗಳಾದ ಸುಭದ್ರ, ಸೌಖ್ಯ, ಕಲ್ಯಾಣ, ಚೈತನ್ಯ ಉತ್ಸವಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.