ಭಟ್ಕಳ: ತಾಲೂಕಿನಲ್ಲಿ ಸದ್ಯ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಆದರೆ, ಹಲವೆಡೆ ವಿವಿಧ ರಾಜ್ಯಗಳ ಜನರು ಇರುವುದು ಬೆಳಕಿಗೆ ಬಂದಿದ್ದು, ಅಂತಹವರನ್ನು ಪತ್ತೆ ಮಾಡಿ, ಜೊತೆಗೆ ಸ್ಥಳೀಯರೂ ಸೇರಿದಂತೆ ಸುಮಾರು 54 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ವಿವಿಧ ರಾಜ್ಯದ 30 ಮಂದಿ ಕಾರ್ಮಿಕರು ವಾಸವಾಗಿದ್ದರೆನ್ನುವ ಮಾಹಿತಿಯನ್ನು ತಾಲೂಕಾಡಳಿತ ಕಳೆದೆರಡು ದಿನಗಳಲ್ಲಿ ಪತ್ತೆ ಮಾಡಿದೆ. ಅವರಲ್ಲಿ ಗುಜರಾತ್‌ನ 11 ಮಂದಿ, ತಮಿಳುನಾಡಿನ 19 ಮಂದಿಯನ್ನು ಸದ್ಯ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಅಂಜುಮಾನ್ ಕಾಲೇಜಿನಲ್ಲಿ ಇರಿಸಲಾಗಿದೆ.
ಇವರೆಲ್ಲರೂ ತಾಲೂಕಿನ ವಿವಿಧೆಡೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇನ್ನು ಕೆಲವರು ಭಟ್ಕಳ ನಿವಾಸಿಗಳಾಗಿದ್ದು. ಸ್ಥಳೀಯರೇ ಮುಂದಾಗಿ 24ಮಂದಿಯನ್ನು ಪತ್ತೆ ಮಾಡಿದ್ದಾರೆ. ಅವರ ರಕ್ತ ಹಾಗೂ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಸದ್ಯ ಇವರೆಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಸದಾಗಿ ಒಟ್ಟು 54 ಮಂದಿಯ ಕೊರೊನಾ ಪರೀಕ್ಷೆಯ ವರದಿ ಇನ್ನಷ್ಟೇ ತಿಳಿದು ಬರಬೇಕಿದೆ. ಇನ್ನು ಕೆಲ ದಿನದ ಹಿಂದೆ ತಾಲೂಕಿನ ಸುಸಗಡಿ ವ್ಯಾಪ್ತಿಯಲ್ಲಿ ಬಿಹಾರ ಮೂಲದ ಜನರು ಜ್ವರ ಹಾಗೂ ಕೆಮ್ಮಿನಿಂದ ಬಳುತ್ತಿದ್ದ ಬಗ್ಗೆ ತಾಲೂಕಿನ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಕೈಗೊಂಡ ಕ್ರಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಬಗ್ಗೆ ತಾಲೂಕಾಡಳಿತ ಕಾರ್ಯ ಪ್ರವೃತ್ತವಾಗಬೇಕಾಗಿದೆ.