ಭಟ್ಕಳ: ಹೋಟೆಲ್ ಗೋಲ್ಡಪುಂಚ್' ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕರನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪಟ್ಟಿಯಲ್ಲಿದ್ದ ವಾಟ್ಸಪ್ ಗ್ರೂಪ್‍ನ ಮೂವರು ಅಡ್ಮಿನ್‍ಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಭಟ್ಕಳದ ದಿನೇಶ್ ನಾಯ್ಕ ಚೌಥನಿ, ಮುಕುಂದ ನಾಯ್ಕ ಸಾರದಾಹೊಳೆ ಹಾಗೂ ರಮೇಶ ನಾಯ್ಕ ಹಡೀನಬಾಳ ಹೊನ್ನಾವರ ಇವರುಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಓದಿ:ಉ.ಕನ್ನಡದಲ್ಲಿ ಕೊರೊನಾದಿಂದ ಏಳು ಮಂದಿ ಗುಣಮುಖ...ಎಂಟು ಹೊಸ ಪ್ರಕರಣಗಳು ಪತ್ತೆ !
ಭಟ್ಕಳದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶದಿಂದ ಅನ್ಯಕೋಮುಗಳ ಮಧ್ಯೆ ವಿಷ ಬೀಜ ಬಿತ್ತುವ ಸಂದೇಶಗಳನ್ನು ರವಾನಿಸಲಾಗಿದೆ. ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಜನಜೀವನ ಅಸ್ತವ್ಯಸ್ತವಾಗಿರುವ ಸಂದರ್ಭದಲ್ಲಿ ವಿವಿಧ ವರ್ಗಗಳ ಜನರ ಮಧ್ಯೆ ವೈರತ್ವ, ದ್ವೇಷ, ವೈಮನಸನ್ನು ಬೆಳೆಸುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಆಪ್ತ ಸಹಾಯಕ ಕರಿಯಪ್ಪ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳ ಪರವಾಗಿ ನ್ಯಾಯವಾದಿ ಮಹೇಶ್ ನಾಯ್ಕ ಇ-ಫೈಲಿಂಗ್‍ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಆಲಿಸಿದ ಜಿಲ್ಲಾ ನ್ಯಾಯಾಧೀಶೆ ವಿಫುಲಾ ಪೂಜಾರಿ ಜಾಮೀನು ಮಂಜೂರು ಮಾಡಿದ್ದಾರೆ.