ಕಾರವಾರ: ಆಕಸ್ಮಿಕ ಬರುವ ರೋಗ ರುಜಿನಿ, ಅಪಘಾತವುಂಟಾದಾಗ ಪಶುಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸುಮಾರು 44 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪಶು ಸಂಚಾರಿ ಆಂಬ್ಯುಲೆನ್ಸ್ ಗಳನ್ನು ಒಂದು ಲಕ್ಷ ಪಶುಗಳಿರುವ ಸ್ಥಳಗಳಿಗೆ ಒಂದೊಂದರಂತೆ ವಿತರಿಸಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಗೆ 13 ಆಂಬ್ಯುಲೆನ್ಸ್ ಬಂದಿವೆ. ಆದರೆ ಅವು ಸಿಬ್ಬಂದಿ, ಚಾಲಕರಿಲ್ಲದೇ ಕಾರ್ಯಸ್ಥಗಿತಗೊಳಿಸಿವೆ. ಹೀಗಾಗಿ ನಿಂತಲ್ಲೇ ನಿಂತು ಆಂಬ್ಯುಲೆನ್ಸ್ ಗಳಿಗೆ ತುಕ್ಕು ಹಿಡಿಯುವ ಸ್ಥಿತಿ ಎದುರಾಗಿದೆ.
ಪಶು ಸಂಚಾರಿ ಆಂಬ್ಯುಲೆನ್ಸ್ : ಹೌದು.. ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಲಾಯಿತು. ಆದರೆ ಉದ್ಘಾಟನೆ ಬಳಿಕ ಅವು ಕಾರ್ಯವನ್ನೇ ಸ್ಥಗಿತಗೊಳಿಸಿವೆ. ಸಿಬ್ಬಂದಿ ಚಾಲಕರ ಕೊರತೆ ಜತೆಗೆ ವೈದ್ಯರ ಕೊರತೆಯಿಂದ ಜಿಲ್ಲೆಯಲ್ಲಿ ಪಶು ಸಂಚಾರಿ ಆಂಬ್ಯುಲೆನ್ಸ್ ಆಸ್ಪತ್ರೆಯ ಆವರಣದಲ್ಲೇ ತುಕ್ಕು ಹಿಡಿಯುತ್ತಿದೆ.
ತುರ್ತು ಸೇವೆ ವಿಳಂಬ: ಪಶು ಇಲಾಖೆ ನೀಡಿದ ತುರ್ತು ಸೇವಾ ನಂಬರ್ ಗೆ ಕರೆ ಮಾಡಿದರೇ ಆಂಬ್ಯುಲೆನ್ಸ್ ಸೇವೆ ತಾತ್ಕಾಲಿಕವಾಗಿ ಇಲ್ಲ ಎಂಬ ಉತ್ತರ ದೊರೆಯುತ್ತಿದೆ. ಜಿಲ್ಲೆಯ ಹೆದ್ದಾರಿಯಲ್ಲಿ ಗೋವುಗಳಿಗೆ ಅಪಘಾತವುಂಟಾದರೆ ತುರ್ತು ಸೇವೆ ಸಿಗುತ್ತಿಲ್ಲ. ಇನ್ನು, ಪಶುಗಳಿಗೆ ರೋಗ ರುಜಿನೆಗಳು ಬಂದರೂ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಇದಲ್ಲದೇ ಪಶುಗಳ ಮೆಡಿಸಿನ್ ಗಳ ಕೊರತೆಯೂ ಸಹ ಇದೆ. ಸಂಚಾರಿ ಪಶು ಸಂಜೀವಿನಿ ಆಂಬ್ಯುಲೆನ್ಸ್ ಗೆ ರಾಜ್ಯ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದು ವ್ಯರ್ಥವಾಗುತ್ತಿದೆ. ಇದೀಗ ಗೋಪಾಲಕರು ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದಾರೆ.
ಬಿಡ್ ಸಲ್ಲಿಕೆಗೆ ಸಂಸ್ಥೆಗಳು ಹಿಂದೇಟು : ಇನ್ನು, ಪಶುಸಂಗೋಪನೆ ಇಲಾಖೆಯು ಕೇಂದ್ರ ಸರ್ಕಾರದ ಶೇ. 60 ರಾಜ್ಯ ಸರ್ಕಾರದಿಂದ ಶೆ. 40 ಅನುದಾನದಡಿ ಈ ಯೋಜನೆ ಜಾರಿಗೆ ತಂದಿದೆ. ಇದಕ್ಕೆ ಅಗತ್ಯ ಸೂಕ್ತ ವ್ಯವಸ್ಥೆ ರಾಜ್ಯ ಸರ್ಕಾರ ಮಾಡದೇ ನಿರ್ಲಕ್ಷ್ಯ ತೋರಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆಂಬ್ಯುಲೆನ್ಸ್ಗೆ ಜಿಲ್ಲೆಯಲ್ಲಿ 39 ಸಿಬ್ಬಂದಿ ಅಗತ್ಯವಿದ್ದು, ಗುತ್ತಿಗೆ ಆಧಾರದಲ್ಲಿ ಈವರೆಗೂ ನೇಮಕ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದಲ್ಲದೇ ಬಿಡ್ ಸಲ್ಲಿಸಲು ಸಹ ಯಾವ ಸಂಸ್ಥೆಯೂ ಆಸಕ್ತಿ ತೋರುತ್ತಿಲ್ಲ ಎನ್ನಲಾಗ್ತಿದೆ.
ಜಿಲ್ಲೆಯಲ್ಲಿ ಶೇ. 69 ರಷ್ಟು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಜಿಲ್ಲೆಯ ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯಿಡಾ ಭಾಗದಲ್ಲಿ ಗೋ ಸಾಕಣೆ ಹೆಚ್ಚಿದ್ದು, ವೈದ್ಯರು ಸಿಬ್ಬಂದಿ ಇಲ್ಲದೇ ಖಾಸಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದಾಗ, ಇನ್ನೊಂದು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಿ ಸೇವೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನುತ್ತಾರೆ ಗೋಪಾಲಕ ಸುನೀಲ್ ಹಣಕೋಣ.
ಅಗತ್ಯ ಕ್ರಮಕ್ಕೆ ಸೂಚನೆ: ಜಿಲ್ಲೆಗೆ 13 ಪಶು ಸಂಚಾರಿ ಅಂಬ್ಯುಲೆನ್ಸ್ ಗಳು ಬಂದಿವೆ .ಪ್ರತಿಯೊಂದಕ್ಕೂ ಮೂವರು ಸಿಬ್ಬಂದಿ ನೇಮಕಕ್ಕೆಅನುಮತಿ ಸಿಕ್ಕಿದೆ .ಬರುವ ತಿಂಗಳೊಳಗೆ ಸಿಬ್ಬಂದಿ ನಿಯುಕ್ತಿ ಮಾಡಲಾಗುವುದು. ಸರಕಾರದ ಯೋಜನೆಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸದೇ, ನಿರ್ಲಕ್ಷ್ಯ ಮಾಡಿದರೆ ಜನರ ತೆರಿಗೆ ಹಣ ವ್ಯರ್ಥವಾಗಿ ಹೋಗುವಂತಾಗಿದೆ. ಇನ್ನಾದರೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಶು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ:ಆರೋಗ್ಯ ಸೌಧದಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಮಕ್ಕಳ ಪಾಲನೆಗೆ ಡೇ ಕೇರ್ ಸೆಂಟರ್