ಶಿರಸಿ: ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದ್ರೆ ತನ್ನ ಸ್ಪರ್ಧೆ ಅನಂತಕುಮಾರ್ ಹೆಗಡೆ ಹಿಂದುಳಿದ ವರ್ಗದ ಜನರ ಮೇಲೆ ಮಾಡಿರುವ ದೌರ್ಜನ್ಯದ ವಿರುದ್ಧದ ಹೋರಾಟ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗುಡುಗಿದ್ದಾರೆ.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಸಂಸದರಾಗಿ ಅನಂತಕುಮಾರ್ ಹೆಗಡೆ ಯಾವ ರೀತಿ ಆಳ್ವಿಕೆ ಮಾಡಿದ್ದಾರೆ ಅನ್ನೋದನ್ನು ಜಿಲ್ಲೆಯ ಜನರಿಗೆ ತಿಳಿಸುತ್ತಿದ್ದೇನೆ. ಅನಂತಕುಮಾರ್ ಹೆಗಡೆಯನ್ನು ಅಗೌರವಿಸುವ ಮತ್ತು ಟೀಕಿಸುವ ಉದ್ದೇಶ ನನ್ನದಲ್ಲ. ಆದ್ರೆ ರಾಜಕೀಯಕ್ಕಾಗಿ ಹಿಂದುಳಿದ ವರ್ಗದ ಜನರನ್ನು ಬಳಸಿಕೊಂಡಿರುವ ಕುರಿತಂತೆ ಹೋರಾಟ ನಡೆಸುತ್ತಿದ್ದೇನೆ ಎಂದರು.
ಕ್ಷೇತ್ರದಲ್ಲಿ ಈಗಾಗಲೇ ನನಗೆ ಗೆಲುವು ಖಚಿತವಾಗಿದೆ. ಈ ಬಗ್ಗೆ ಕರಾವಳಿ ಭಾಗದಲ್ಲಿ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಆನಂದ ಅಸ್ನೋಟಿಕರ್ ಅವರನ್ನ ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಐಟಿ ದಾಳಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐಟಿ ಇಲಾಖೆ ಬ್ಯಾಲೆನ್ಸ್ ಮಾಡಲು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿರಬಹುದು. ನಾವು ಚುನಾವಣೆಯನ್ನು ಜನರ ಪ್ರೀತಿಯ ಮೇಲೆ ನಡೆಸುತ್ತಿದ್ದೇವೆ. ಕಳೆದ 2 ದಿನಗಳ ಹಿಂದೆ ನನ್ನ ಆಪ್ತನ ಮೇಲೆ ದಾಳಿ ಆಗಿದ್ದರೂ ವ್ಯವಹಾರ ವಿಚಾರದಲ್ಲಿ ನನಗೂ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.