ಕಾರವಾರ(ಉತ್ತರ ಕನ್ನಡ): ಕಣ್ಣು ಗುಡ್ಡೆಯನ್ನೆ ಕಿತ್ತಿದ್ದ ಕರಡಿಯೊಂದಿಗೆ 72 ವರ್ಷದ ವೃದ್ಧ ಕಾಲು ಗಂಟೆ ಕಾದಾಡಿ ಪವಾಡ ಸದೃಶ್ಯ ಬದುಕುಳಿದ ಘಟನೆ ಜೋಯಿಡಾ ತಾಲೂಕಿನ ಜಗಲ್ ಪೇಟನ ತಿಂಬಾಲಿಯಲ್ಲಿ ನಡೆದಿದೆ. ಕರಡಿ ದಾಳಿಯಿಂದ ಗಂಭೀರ ಗಾಯಗೊಂಡವರನ್ನು ಮಾಲೋರ್ಗಿ ಗ್ರಾಮದ ನಿವಾಸಿ ವಿಠ್ಠಲ್ ಸಲಾಕೆ ಎಂದು ಗುರುತಿಸಲಾಗಿದೆ.
ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ದಾಳಿ ಮಾಡಿದ ಕರಡಿಯೊಂದಿಗೆ ವಿಠ್ಠಲ್ ಸಲಾಕೆ 15 ನಿಮಿಷಕ್ಕೂ ಹೆಚ್ಚು ಕಾಲ ಕಾದಾಡಿ ಜೀವ ಉಳಿಸಿಕೊಂಡಿದ್ಧಾರೆ. ದಾಳಿ ವೇಳೆ, ಕರಡಿಯೂ ಅವರ ಒಂದು ಕಣ್ಣನ್ನು ಕಿತ್ತು ಹಾಕಿದ್ದು, ಮತ್ತೊಂದು ಕಣ್ಣನ್ನು ಗಂಭೀರವಾಗಿ ಗಾಯಗೊಳಿಸಿದೆ. ಅಲ್ಲದೇ ತಲೆಯ ಭಾಗದ ಚರ್ಮವನ್ನು ಕಿತ್ತಿರುವ ಕರಡಿ ದೇಹದ ವಿವಿಧ ಭಾಗಗಳ ಮೇಲೆ ಸಾಕಷ್ಟು ಗಾಯಗಳನ್ನು ಮಾಡಿದ್ದಾರೆ.
ಇಷ್ಟಾದರೂ ಕರಡಿಯೊಂದಿಗೆ ಸೆಣಸಾಡಿದ ವೃದ್ಧ ಕೊನೆಗೆ ಜೋರಾಗಿ ಕೂಗಾಡಿದ್ದಾರೆ. ಬಳಿಕ ಕರಡಿ ಬಿಟ್ಟು ಪರಾರಿಯಾಗಿದೆ. ಕರಡಿ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವೃದ್ದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ತಮ್ಮ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗಿದ್ಧಾರೆ. ರಕ್ತ ಮಡುವಿನಲ್ಲಿದ್ದ ಅವರನ್ನು ಕೂಡಲೇ ರಾಮನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನು ಬೆಳಗಾವಿಗೆ ಆಸ್ಪತ್ರಗೆ ರವಾನಿಸಿದ್ದಾರೆ. ಗಾಯಗೊಂಡಿರುವ ವಿಠ್ಠಲ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿರುವ ಕಾರಣ ಮುಂದಿನ ಎರಡ್ಮೂರು ದಿನಗಳಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ಧಾರೆ.
ಹಳೆಯ ಕರಡಿ ದಾಳಿ ಘಟನೆಗಳು: - ಬಹಿರ್ದೆಸೆಗೆ ಹೋಗಿದ್ದ ಯುವಕನ ಮೇಲೆ ದಾಳಿ ಮಾಡಿತ್ತು ಕರಡಿ: ಕೊಪ್ಪಳದ ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಯಮನೂರು ಈರಪ್ಪ ಹಿರೇಬೆಣಕಲ್ ಎಂಬ ಯುವಕ ನಿಸರ್ಗದ ಕರೆಗೆ ಹೋಗಿದ್ದ ವೇಳೆ ಕರಡಿ ದಾಳಿ ಮಾಡಿತ್ತು. ಕರಡಿ ದಾಳಿ ಮಾಡುತ್ತಿದ್ದಂತೆಯೇ ಯುವಕ ಜೋರಾಗಿ ಕಿರುಚಿದ್ದು ತಕ್ಷಣ ಸಮೀಪದಲ್ಲಿದ್ದ ಜನ ಯುವಕನ ರಕ್ಷಣೆಗೆ ಧಾವಿಸಿದ್ದರು. ಜರನ ಗುಂಪು ಕಂಡು ಬೆಚ್ಚಿ ಬಿದ್ದಿದ್ದ ಕರಡಿ ಬೆಟ್ಟದ ಕಡೆ ಓಡಿ ಹೋಗಿತ್ತು. ಇದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದ. ಕರಡಿ ದಾಳಿಯಿಂದ ಗಾಯಗೊಂಡಿದ್ದ ಆತನಿಗೆ ಚಕಿತ್ಸೆ ನೀಡಲಾಗಿತ್ತು. ಈ ಘಟನೆ ನವೆಂಬರ್ 2022ರಂದು ನಡೆದಿತ್ತು.
(ತುಮಕೂರು) ಹೊಲಕ್ಕೆ ಹೋಗುತ್ತಿದ್ದ ರೈತನ ಮೇಲೆ ಕರಡಿ ಅಟ್ಯಾಕ್: 2022 ರ ಡಿಸೆಂಬರ್ ತಿಂಗಳಿನಲ್ಲಿ ನಾಗರಾಜಪ್ಪ ಎಂಬ ರೈತ ತನ್ನ ಹೊಲಕ್ಕೆ ಕುರಿ, ಮೇಕೆಗಳಿಗೆ ಮೇವು ತರಲು ಹೋಗುತ್ತಿದ್ದ ವೇಳೆ ಕರಡಿ ದಾಳಿ ಮಾಡಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಇವರು ಕೂಡ ಕರಡಿ ದಾಳಿ ವೇಳೆ ಜೋರಾಗಿ ಕಿರುಚಿಕೊಂಡದ್ದರಿಂದ ಸ್ಥಳೀಯರು ಆಗಮಿಸಿ ಕರಡಿ ಪರಾರಿಯಾಗಿತ್ತು.
ಇದನ್ನೂ ಓದಿ: Leopard death: ಬಂಡೀಪುರ ಅರಣ್ಯದಲ್ಲಿ 3 ಚಿರತೆಗಳ ಶವ ಪತ್ತೆ; ಸಾಕು ನಾಯಿಯ ಕಳೇಬರಕ್ಕೆ ವಿಷ ಬೆರೆಸಿದ ವ್ಯಕ್ತಿ ಸೆರೆ