ಕಾರವಾರ: ಕಣ್ಣು ಕಾಣದ ಕಾರಣಕ್ಕೆ ದುಡಿಯಲು ಸಾಧ್ಯವಾಗದೇ ಮನೆಯಲ್ಲಿದ್ದ ತಂದೆಯನ್ನು ಮಗನೊಬ್ಬ ಹೊರಹಾಕಿದ್ದು, ಇದೀಗ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೂ ಅಸಹಾಯಕರಾಗಿ ಕೊನೆಗೆ ಭಿಕ್ಷಾಟನೆಗೆ ಇಳಿದಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಶಿರವಾಡ ಗ್ರಾಮದ ಹನುಮಂತ ವಡ್ಡರ್ ಮನೆಯಿಂದ ಹೊರಹಾಕಲ್ಪಟ್ಟು ಅನಾಥರಾಗಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಒಬ್ಬ ಪುತ್ರ ಹಾಗೂ ನಾಲ್ವರು ಹೆಣ್ಣು ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದ್ದ ತಂದೆಗೆ ಇದೀಗ ಮಕ್ಕಳು ಇದ್ದೂ ಇಲ್ಲದಂತಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುದುತ್ತಿದ್ದು, ರೈಲ್ವೆ- ಬಸ್ ನಿಲ್ದಾಣ, ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.
ನಗರದ ಗಾಂಧಿ ಪಾರ್ಕ್ ಬಳಿ ಗುರುವಾರ ಭಿಕ್ಷೆ ಬೇಡುತ್ತ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಬಳಿ ಬಂದಿದ್ದ ಹನುಮಂತ ಅವರನ್ನು ವಿಚಾರಿಸಿದಾಗ ಹನುಮಂತ ತನ್ನ ಜೀವನ ಬೀದಿಪಾಲಾದ ಬಗ್ಗೆ ಬಾಯ್ಬಿಟಿದ್ದಾನೆ.
ಮೂಲತಃ ಶಿವಮೊಗ್ಗದವರಾಗಿದ್ದು, ಚಿಕ್ಕವರಿರುವಾಗಲೇ ಶಿರವಾಡಕ್ಕೆ ಬಂದು ನೆಲಸಿದ್ದೆವು. ಕಲ್ಲು ಒಡೆಯುವ ಕೆಲಸ ಮಾಡಿಕೊಂಡಿದ್ದ ನನಗೆ 60 ವರ್ಷವಾಗಿದೆ. ಐವರು ಮಕ್ಕಳಿಗೂ ಮದುವೆ ಮಾಡಿದ್ದೇನೆ. ಆದರೆ, ಕಳೆದ ಒಂದು ವರ್ಷದ ಹಿಂದೆ ಕಲ್ಲು ಒಡೆಯುವಾಗ ಕಣ್ಣಿಗೆ ಕಲ್ಲು ತಾಗಿ ಕಣ್ಣಿನ ಆಪರೇಷನ್ ಆಗಿದೆ.
ಹೀಗಾಗಿ ಅಂದಿನಿಂದ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಆದರೆ, ಇದೇ ಕಾರಣಕ್ಕೆ ಮಗ ಕುಡಿದು ತನಗೆ ತನ್ನ ಪತ್ನಿಗೆ ನಿಂದಿಸುವುದು, ಹೊಡೆಯುವುದು ಮಾಡುತ್ತಿದ್ದ. ವರ್ಷದಿಂದಲೂ ಸಹಿಸಿಕೊಂಡು ಬಂದಿದ್ದೆ. ಆದರೆ, ಕಳೆದ ಒಂದು ವಾರದ ಹಿಂದೆ ಕೆಲಸಕ್ಕೆ ತೆರಳುವಂತೆ ಹೇಳಿ ಹೊರಹಾಕಿದ್ದು, ಮನೆಯಲ್ಲಿ ಇರಲು ಸಾಧ್ಯವಾಗದೇ ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ದಿನ ಕಳೆಯುತ್ತಿದ್ದೇನೆ. ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕವರ ಬಳಿ ಭಿಕ್ಷೆ ಬೇಡುತ್ತಿದ್ದೇನೆ ಎಂದು ದೂರಿದ್ದಾರೆ.
ಮಾನವೀಯತೆ ತೋರಿದ ಮಾಧವ ನಾಯಕ
ಇನ್ನು ಹನುಮಂತ ಅವರ ಕಥೆ ಕೇಳಿ ಮರುಗಿದ ಮಾಧವ ನಾಯಕ ಕೂಡಲೇ ಯಲ್ಲಾಪುರದ ಅನಾಥಾಶ್ರಮವೊಂದಕ್ಕೆ ಸೇರಿಸಲು ಮಾತನಾಡಿದ್ದಾರೆ. ಈ ವೇಳೆ, ತನ್ನ ಹೆಂಡತಿಯನ್ನೂ ಕರೆತರುವುದಾಗಿ ಹನುಮಂತ ಕೇಳಿಕೊಂಡಿದ್ದು, ಇಬ್ಬರನ್ನೂ ಸೇರಿಸಲು ವ್ಯವಸ್ಥೆ ಮಾಡುವುದಾಗಿ ಮಾಧವ ನಾಯಕ ತಿಳಿಸಿದ್ದಾರೆ. ಸ್ವಂತ ಮಕ್ಕಳೇ ನೋಡಿಕೊಳ್ಳದೇ ನಿರ್ಲಕ್ಷ್ಯ ಮಾಡಿರುವ ತಂದೆಗೆ ಈಗ ಮಾಧವ ನಾಯಕ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದನ್ನು ಓದಿ: 'ವೃಕ್ಷಮಾತೆ' ತುಳಸಿಗೌಡರಿಗೆ ದೆಹಲಿಗೆ ತೆರಳಲು ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತ, ಸ್ಥಳೀಯರ ಅಸಮಾಧಾನ