ಕಾರವಾರ: ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ಎಂಜಿನಿಯರಿಂಗ್ ಪದವೀಧರನೊಬ್ಬ ಕಾಲ್ನಡಿಗೆಯಲ್ಲಿಯೇ ದೇಶ ಸುತ್ತುತ್ತಾ ವಿವಿಧ ರಾಜ್ಯಗಳ ಆಚಾರ- ವಿಚಾರ, ಭಾಷೆ, ಸಂಸ್ಕೃತಿ ಅಲ್ಲಿನ ಕೃಷಿ ಪದ್ಧತಿಗಳ ಬಗ್ಗೆ ಅಲ್ಲಿನವರಿಂದಲೇ ಮಾಹಿತಿ ಪಡೆದು ಬಳಿಕ ಪುಸ್ತಕ ಬರೆಯುವ ಉದ್ದೇಶದೊಂದಿಗೆ ದೇಶ ಪರ್ಯಟನೆಯ ದಿಟ್ಟ ಹೆಜ್ಜೆಯಿಟ್ಟಿದ್ದಾನೆ.
ಉತ್ತರ ಪ್ರದೇಶದ ಗೋರಖ್‌ಪುರ ಧರ್ಮಪುರ ಗ್ರಾಮದ ರೋಬಿನ್ ಸನೋಜ್ ಎಂಬಾತ ದೇಶ ಪರ್ಯಟನೆ ಹೊರಟ ಉತ್ಸಾಹಿ ಯುವಕನಾಗಿದ್ದಾನೆ. 2002 ರಲ್ಲಿ ತನ್ನ ಎಂಜಿನಿಯರಿಂಗ್ ಪದವಿ ಮುಗಿಸಿರುವ ರೋಬಿನ್ ಸನೋಜ್ ಕಾಲ್ನಡಿಗೆ ಮೂಲಕ ಭಾರತ ದೇಶ ಸುತ್ತಬೇಕು ಎಂಬ ಬಯಕೆಯೊಂದಿಗೆ 2022 ರ ಅಕ್ಟೋಬರ್ 21 ರಂದು ಕಾಲ್ನಡಿಗೆಯಲ್ಲಿ ಯಾತ್ರೆ ಆರಂಭಿಸಿದ್ದನು. ಪ್ರಯಾಣ ಪ್ರಾರಂಭಿಸಿದ 360 ದಿನಗಳಲ್ಲಿ 6,000 ಕಿಲೋ ಮೀಟರ್ ಸಾಗಿದ್ದಾನೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಅಸ್ಸೋಂ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ಗಢ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಪರ್ಯಟನೆ ಮುಗಿಸಿ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಿದ್ದು, ಇದೀಗ ಮಂಗಳೂರು ಮೂಲಕ ಕಾರವಾರಕ್ಕೆ ಅಡಿ ಇಟ್ಟಿದ್ದಾನೆ.
ಪ್ರತಿ ದಿನ 30 ರಿಂದ 35 ಕಿಲೋ ಮೀಟರ್ ನಡೆಯುವ ರೋಬಿನ್ ಸನೋಜ್ ತಾನು ಹೋಗುವ ಆಯಾ ಊರಿನಲ್ಲಿನ ಸಾರ್ವಜನಿಕರ ಸಹಕಾರದೊಂದಿಗೆ ಅಲ್ಲಿನ ದೇವಾಲಯದಲ್ಲಿ ಮಲಗಿ ವಿಶ್ರಾಂತಿ ಪಡೆದುಕೊಂಡು ಮುಂದೆ ಸಾಗುತ್ತಿದ್ದಾರೆ. ಬೆನ್ನಿಗೆ ಒಂದು ದೊಡ್ಡ ಬ್ಯಾಗ್, ಅದರೊಳಗೆ ಭಾರತದ ಭಾವುಟ ಕಟ್ಟಿಕೊಂಡು ರಸ್ತೆಯಲ್ಲಿ ತೆರಳುತ್ತಿದ್ದಾರೆ. ದಾನಿಗಳು ಹಾಗೂ ಸ್ವಂತ ಖರ್ಚಿನಲ್ಲಿಯೇ ನಿತ್ಯದ ಊಟ, ತಿಂಡಿಯ ವ್ಯವಸ್ಥೆಯನ್ನು ಮಾಡಿಕೊಂಡು ಕಳೆದ ಒಂದು ವರ್ಷದಿಂದ ದೇಶ ಪರ್ಯಟನೆ ಮಾಡುತ್ತಿದ್ದಾರೆ.
ಕರ್ನಾಟಕದ ಒಳಗೆ ಪರ್ಯಟನೆ ಮುಗಿಸಿದ ನಂತರ ಗೋವಾ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಎಲ್ಲ ರಾಜ್ಯಗಳಿಗೂ ಭೇಟಿ ನೀಡುವ ಗುರಿ ಹೊಂದಿದ್ದಾನೆ ಈ ಯುವಕ. ಸಂಪೂರ್ಣ ಯಾತ್ರೆ ಮುಗಿದ ನಂತರ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಅಲ್ಲಿನ ವೈವಿಧ್ಯಮಯ ಕೃಷಿ ಪದ್ಧತಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಒಂದು ಪುಸ್ತಕ ಬರೆಯುವುದಾಗಿ ರೋಬಿನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಇಂಗಾಲದ ದುಷ್ಪರಿಣಾಮಗಳ ಕುರಿತು ಜಾಗೃತಿ: ಸೈಕಲ್ ಏರಿ 12 ದೇಶಗಳಿಗೆ ಪ್ರಯಾಣ ಆರಂಭಿಸಿದ ಯುವಕ