ಕಾರವಾರ: ಕಾರವಾರದ ನಗರಸಭೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಂದ ಬರೊಬ್ಬರಿ 18 ಕೋಟಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿವೆ. ಪ್ರಮುಖವಾಗಿ ವಾಣಿಜ್ಯ ಮಳಿಗೆಗಳು, ಪೆಟ್ಟಿಗೆ ಅಂಗಡಿ, ನೀರು ಪೂರೈಕೆ ತೆರಿಗೆ, ಯುಜಿಡಿ ತೆರಿಗೆ, ಲೀಸ್ ನೀಡಿದ್ದ ತೆರಿಗೆ ಸೇರಿ ನಿರಂತರವಾಗಿ ಬರಬೇಕಾದ ತೆರಿಗೆಯಲ್ಲಿ 11.48 ಕೋಟಿ ಬಾಕಿ ಉಳಿದಿದೆ.
ಇದಲ್ಲದೆ ನ್ಯಾಯಾಲಯದಲ್ಲಿರುವ ಆಸ್ತಿಗಳು, ಬಿಟ್ಟುಹೋದ ಆಸ್ತಿಗಳು, ಸರ್ಕಾರೇತರ ಕಟ್ಟಡಗಳಾದ ಮೆಡಿಕಲ್ ಕಾಲೇಜು ವೈದ್ಯರ ಕ್ವಾಟ್ರಸ್‌ನಿಂದ 1.51 ಕೋಟಿ, ಪಿಡಬ್ಲೂಡಿ ಕ್ವಾಟ್ರಸ್‌ನಿಂದ 88 ಲಕ್ಷ, ಹಾಸ್ಟೆಲ್‌ನಂತಹ ಕಟ್ಟಡಗಳಿಂದಲೂ ತೆರಿಗೆಗಳು ಬಾಕಿ ಉಳಿದಿದೆ ಎಂದು ನಗರಸಭೆ ಪೌರಾಯುಕ್ತರು ಹೇಳಿದರು.
ಸರ್ಕಾರಿ ಕಚೇರಿಗಳು ಮಾತ್ರವಲ್ಲದೆ ಬಿಣಗಾದಲ್ಲಿರುವ ಖಾಸಗಿ ಗ್ರಾಸಿಮ್ ಇಂಡಸ್ಟ್ರೀಸ್ ಕಂಪೆನಿಯಿಂದಲೂ ಸುಮಾರು 1 ಕೋಟಿ ತೆರಿಗೆ ಬಾಕಿ ಇದೆ. ಇದಲ್ಲದೆ ಕಡಲ ತೀರದಲ್ಲಿರುವ ಡ್ರೈವ್ ಇನ್, ಅಜ್ವೀ ಓಶನ್, ಮಿತ್ರ ಸಮಾಜ ಹೊಟೇಲ್ಗಳಿಂದಲೂ ತೆರಿಗೆ ಬಾಕಿ ಇದೆ ಎಂದು ತಿಳಿದುಬಂದಿದೆ.
ಇದೆಲ್ಲವೂ ಕಳೆದ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದರು ಕೇಳುವವರು ಯಾರು ಇಲ್ಲದಂತಾಗಿ ಕೊಟ್ಯಾಂತರ ರೂ ತೆರಿಗೆ ಪಾವತಿ ಇದೀಗ ಎಲ್ಲರಿಗೂ ಹೊರೆಯಾಗಿದೆ.ಆದರೆ ತೆರಿಗೆ ಪಾವತಿಯಾಗದ ಕಾರಣ ಇದೀಗ ನಗರಸಭೆಯ ಆದಾಯ ಕಡಿಮೆಯಾಗಿದೆ. ನಗರಸಭೆಯಿಂದ ಹೆಸ್ಕಾಂಗೆ ಪಾವತಿಸಬೇಕಿದ್ದ ಬೀದಿ ದೀಪದ 48 ಲಕ್ಷ ಬಿಲ್ ಬಾಕಿ ಉಳಿಸಿಕೊಂಡಿದೆ.
ನೌಕಾರರ ಸಂಬಳ ಹೊರತುಪಡಿಸಿ ಪ್ರತಿ ತಿಂಗಳು 25 ಲಕ್ಷ ನಿರ್ವಹಣೆಗೆ ಖರ್ಚು ಮಾಡುವ ನಗರಸಭೆಗೆ ಇದೀಗ ತೆರಿಗೆ ವಸೂಲಿಯೂ ದೊಡ್ಡ ಸವಾಲಾಗಿದೆ. ಇನ್ನು ತೆರಿಗೆ ಪಾವತಿಯಾಗದ ಕಾರಣ ನಗರಸಭೆಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದು ಕಾಮಗಾರಿ ನಡೆಸಿದವರಿಗೆ ಸುಮಾರು 6 ಕೋಟಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.
ಕೆಲ ಇಲಾಖೆಗಳಿಗೆ ತೆರಿಗೆ ಕಟ್ಟಬೇಕು ಎಂಬುದೇ ತಿಳಿದಿಲ್ಲ, ಈ ಹಿಂದೆ ಅಧಿಕಾರಿಗಳು ಕೂಡ ತೆರಿಗೆ ಸಂಗ್ರಹಕ್ಕೆ ನಿರ್ಲಕ್ಷ್ಯ ಮಾಡಿದ ಕಾರಣ ಇದೀಗ ಕೋಟಿ ಕೋಟಿ ತೆರಿಗೆ ಬಾಕಿ ಉಳಿಯುವಂತಾಗಿದೆ. ಇದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಬಿಲ್ಗಳು ಪೆಂಡಿಗ್ ಇರುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಇದಕ್ಕೂ ನಮಗೂ ಸಂಬಂಧ ಇಲ್ಲದ ಕಾರಣ ನಮ್ಮ ಹಣವನ್ನು ಸರ್ಕಾರ ಕೂಡಲೇ ಪಾವತಿ ಮಾಡಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿವಿಧ ಇಲಾಖೆಗಳು ತೆರಿಗೆ ಪಾವತಿಸಲು ತೋರಿದ ಬೇಜವಾಬ್ದಾರಿಯಿಂದಾಗಿ ಸರ್ಕಾರಕ್ಕೆ ಪಾವತಿಯಾಗಬೇಕಿದ್ದ ಕೊಂಟ್ಯಾಂತರ ಹಣ ಬಾಕಿ ಉಳಿದಿದ್ದು ದೊಡ್ಡ ನಷ್ಟ ಅನುಭವಿಸುವಂತಾಗಿದೆ. ಇನ್ನಾದರು ಅಧಿಕಾರಿಗಳು ಈ ಬಗ್ಗೆ ಲಕ್ಷ್ಯವಹಿಸಿ ಸರ್ಕಾರಕ್ಕೆ ಬರಬೇಕಿರುವ ತೆರಿಗೆಯನ್ನು ಪಾವತಿಸಿಕೊಳ್ಳಬೇಕಿದೆ.
ಇದನ್ನೂ ಓದಿ: ಧಗ ಧಗ ಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ: ಚಾಲಕ, ಕ್ಲೀನರ್ ಪಾರು!