ಭಟ್ಕಳ(ಉತ್ತರಕನ್ನಡ): ತಾಲೂಕು ಸರಕಾರಿ ಆಸ್ಪತ್ರೆಗೆ ಸೇರಿದ 13 ಎಕರೆ ಜಾಗದಲ್ಲಿ 7 ಎಕರೆ ಜಾಗವನ್ನು ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಯಶಸ್ವಿಯಾಗಿದ್ದಾರೆ. ಕಳೆದ ಏಳು ದಶಕದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿದ ಜಾಗವನ್ನು ಪಹಣಿ ಮಾಡಿಸಿರಲಿಲ್ಲ. ಇದೀಗ ಆಸ್ಪತ್ರೆ ಜಾಗಕ್ಕೆ ಪಹಣಿ ಆಗಿದೆ.
1956ರಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಆಸ್ಪತ್ರೆಗಾಗಿ ಕಾಯ್ದಿರಿಸಿದ 13 ಎಕರೆ ಜಾಗವನ್ನು ಪಹಣಿ ಮಾಡಲು ಸಾಧ್ಯವಾಗಿರಲಿಲ್ಲ. 2001ರಲ್ಲಿ ಆಸ್ಪತ್ರೆಯ ಜಾಗವನ್ನು ಉಳಿಸಿ ಇಲ್ಲಿನ ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಆಸ್ಪತ್ರೆಯ ಜಾಗವನ್ನು ಪಹಣಿ ಮಾಡಿಸಿಕೊಡಬೇಕೆಂಬ ಹೋರಾಟ ಶುರುವಾಗಿತ್ತು. ಇದೀಗ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಸದರಿ 7 ಎಕರೆ 3 ಗುಂಟೆ ಜಾಗವನ್ನು ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡಿಸಿದ್ದಾರೆ.
ಭಟ್ಕಳ ಸರಕಾರಿ ಆಸ್ಪತ್ರೆ ರಾಜ್ಯ ಮಟ್ಟದಲ್ಲಿಯೇ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ಹಿಂದೆ ಮಂಕಾಳ ವೈದ್ಯ ಶಾಸಕರಾಗಿದ್ದ ಅವಧಿಯಲ್ಲಿ 100 ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, "ಭಟ್ಕಳ ಸರಕಾರಿ ಆಸ್ಪತ್ರೆಯು ಮಾದರಿ ಸರಕಾರಿ ಆಸ್ಪತ್ರೆಯಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ 250 ಹಾಸಿಗೆಯುಳ್ಳ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಅದರಂತೆ ಇಲ್ಲಿ ಸೇವೆ ಸಲ್ಲಿಸಿ ಕೆಲಸ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗೆ ಕ್ವಾಟ್ರಸ್ನ ಅವಶ್ಯಕತೆ ಇದೆ. ಇದಕ್ಕೆ ನಿಗದಿತ ಜಾಗದ ಪಹಣಿ ಮಾಡಬೇಕಿದೆ".
ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, "ಆಸ್ಪತ್ರೆಯ ಅಭಿವೃದ್ಧಿಗೆ ಮೀಸಲಿಟ್ಟ ಜಾಗವನ್ನು ಪಹಣಿ ಮಾಡಬೇಕಾದ ಅವಶ್ಯಕತೆ ಇದೆ. ಈಗಾಗಲೇ ಸಾಕಷ್ಟು ಜಾಗವು ಸರಕಾರಿ ಕಟ್ಟಡದ ನಿರ್ಮಾಣಕ್ಕಾಗಿ ಒತ್ತುವರಿಯಾಗಿದ್ದವು. ಮೇಲ್ದರ್ಜೆಗೆರಿಸಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡಬೇಕು. ಇದಕ್ಕೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮುತುವರ್ಜಿ ವಹಿಸಿದ್ದು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ ಸಹಕಾರ ನೀಡಿದ್ದಾರೆ" ಎಂದು ಹೇಳಿದರು.
ಉಗುರು ಸುತ್ತಿಗೆ ಚಿಕಿತ್ಸೆ ಪಡೆದ ಸಚಿವ ಮಂಕಾಳ: ಇದೇ ವೇಳೆ ಸಚಿವ ಮಂಕಾಳ ವೈದ್ಯ ಅವರು ಉಗುರು ಸುತ್ತಿಗೆ (ಪೆರೋನ್ಯಾಚಿಯಾ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆಸ್ಪತ್ರೆಯ ಸರ್ಜನ್ ಡಾ. ಅರುಣ ಕುಮಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ, ಅರವಳಿಕೆ ತಜ್ಞೆ
ಡಾ.ಸವಿತಾ ಕಾಮತ್ ಹಾಗೂ ಡಾ.ಲಕ್ಷ್ಮೀಶ ನಾಯ್ಕ ಅವರಿದ್ದರು.
ಇದನ್ನೂ ಓದಿ: 'ಗೋವಾಗೆ ಸಾಗಿಸುತ್ತಿದ್ದದ್ದು ಮದ್ಯಕ್ಕೆ ಬಳಸುವ ಸ್ಪಿರಿಟ್': ಕಾರವಾರ ಶಾಸಕರ ನಡೆ ಟೀಕಿಸಿದ ಬಿಜೆಪಿ