ಕಾರವಾರ: ಹೆಲ್ಮೆಟ್ ಧರಿಸದೇ ಓಡಾಡುವ ಬೈಕ್ ಸವಾರರಿಗೆ ಜಾಗೃತಿ, ಎಚ್ಚರಿಕೆ ಹಾಗೂ ದಂಡದ ಮೂಲಕ ಎಚ್ಚರಿಸಿದ್ದ ಪೊಲೀಸರು ಇದೀಗ ನನ್ನನ್ನು ಕ್ಷಮಿಸಿ ಎಂಬ ವಿನೂತನ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ನಗರ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ನಡೆಸಲಾಯಿತು.
ನಗರದ ಸುಭಾಷ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹೂವಿನ ಚೌಕ್, ಪಿಕಳೆ ರಸ್ತೆ ಸೇರಿದಂತೆ ವಿವಿಧ ವೃತ್ತಗಳಲ್ಲಿ ಹೆಲ್ಮೆಟ್ ಧರಿಸದೆ ತೆರಳುತ್ತಿದ್ದ ಬೈಕ್ ಸವಾರರನ್ನು ಅಡ್ಡಗಟ್ಟಿದ ಪೊಲೀಸರು ಅವರ ಕೈಗೆ ನನ್ನನ್ನು ಕ್ಷಮಿಸಿ ಎಂಬ ಬೋರ್ಡ್ ಒಂದನ್ನು ನೀಡಿ ಜಾಗೃತಿ ಮೂಡಿಸಲಾಯಿತು.
ಇದರಲ್ಲಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದೆನೆ. ನನ್ನ ಜೀವ ಸುರಕ್ಷತೆಯ ಹಿತದೃಷ್ಟಿಯಿಂದ ನಾನು ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಫಲಕದಲ್ಲಿ ಬರೆಯಲಾಗಿತ್ತು. ಈ ಮೂಲಕ ಸಾರ್ವಜನಿಕರಿಗೆ ವಿನೂತನವಾಗಿ ಜಾಗೃತಿಯನ್ನು ಮೂಡಿಸಲಾಯಿತು.
ವಾಹನ ಸವಾರರಿಗೆ ರಸ್ತೆ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸಲು ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಈ ರೀತಿ ವಿನೂತನ ಅಭಿಯಾನ ನಡೆಸಲಾಗಿದೆ ಎಂದು ಕಾರವಾರ ನಗರ ಸಂಚಾರ ಠಾಣೆಯ ಪಿಎಸ್‌ಐ ನಾಗಪ್ಪ ಬಿ ಮಾಹಿತಿ ನೀಡಿದರು.
ಈ ವೇಳೆ ಸಿಬ್ಬಂದಿಗಳಾದ ಗಣಪತಿ ಬೆನಕಟ್ಟಿ, ಮೌಲಾಲಿ, ಗದಿಗೆಪ್ಪ ಚಕ್ರಸಾಲಿ, ನಾಗರಾಜ ಹರಪನಹಳ್ಳಿ, ಪ್ರವೀಣ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ:ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ