ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ದಿನೇ ದಿನೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅಪಘಾತಗಳಿಗೆ ತಕ್ಕಂತೆ ತುರ್ತು ಚಿಕಿತ್ಸಾ ಆಸ್ಪತ್ರೆಗಳು ಇಲ್ಲದೇ ಇರುವುದೂ ಒಂದು ಕಾರಣವಾಗಿದೆ.ಇದೀಗ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿನ ಬಹುತೇಕ ರಸ್ತೆಗಳು ಗುಡ್ಡ, ಬೆಟ್ಟ, ಅರಣ್ಯ ಪ್ರದೇಶದಿಂದ ಹಾದು ಹೋಗಿ ತಿರುವು ಮುರುವಾಗಿರುವುದು ಒಂದು ಕಾರಣವಾದರೇ, ಇನ್ನು ಜಿಲ್ಲೆಯಾದ್ಯಂತ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆಗಳಲ್ಲಿ ಸರಿಯಾದ ಮಾರ್ಗಸೂಚಿಗಳು ಇಲ್ಲದೇ ಇರುವುದು ಕಾರಣ ಎನ್ನಲಾಗುತ್ತಿದೆ. ಆದರೆ, ಹೀಗೆ ಅಪಘಾತವಾದ, ಇಲ್ಲವೇ ಇತರ ಅವಘಡದಂತಹ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸಲು ಸೂಕ್ತ ಆಸ್ಪತ್ರೆಗಳಿಲ್ಲ. ಈ ಕಾರಣದಿಂದ ಇದೀಗ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ #EmergencyHospitalInUK ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯ ಪ್ರಮುಖ ಸಾಮಾಜಿಕ ಜಾಲತಾಣಗಳಾಗಿರುವ ಯುಕೆ ಎಕ್ಸ್‌ಪ್ರೆಸ್, ನಮ್ಮ ಯುಕೆ, ಉತ್ತರ ಕನ್ನಡ ಟ್ರೋಲರ್ಸ್, ನಮ್ಮ ಉತ್ತರ ಕನ್ನಡ ಮೆಮೆಸ್ ಈ ಅಭಿಯಾನದಲ್ಲಿ ಸಕ್ರಿಯಗೊಂಡಿದ್ದು, ಎಲ್ಲೆಡೆ ಪೋಸ್ಟ್ ಗಳನ್ನು ಶೇರ್ ಮಾಡುತ್ತಿವೆ.
2018ರ ಮೇ ತಿಂಗಳಿನಿಂದ 2019ರ ಏಪ್ರಿಲ್‌ವರೆಗೆ ಜಿಲ್ಲೆಯ ವಿವಿಧೆಡೆ ನಡೆದಿರುವ 1,103 ಅಪಘಾತಗಳ ಪೈಕಿ 239 ಮಂದಿ ಮೃತಪಟ್ಟಿದ್ದಾರೆ. ಆದರೆ, ಹೀಗೆ ಸಂಭವಿಸಿದ ಬಹುತೇಕ ಅಪಘಾತಗಳಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ಕಾರವಾರದಲ್ಲಿ ಮೆಡಿಕಲ್ ಕಾಲೇಜು ಇದೆಯಾದರೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಅಪಘಾತವಾದರೇ ಗೋವಾದ ಬಾಂಬೋಲಿಮ್ ಗೆ, ಮಣಿಪಾಲ, ಮಂಗಳೂರು, ಹುಬ್ಬಳ್ಳಿ ಇಲ್ಲವೇ ಶಿವಮೊಗ್ಗಕ್ಕೆ ತೆರಳಬೇಕಿದೆ. ಆದರೆ ಈ ಎಲ್ಲ ಆಸ್ಪತ್ರೆಗಳೂ ೧೦೦ ಕ್ಕೂ ಹೆಚ್ಚು ಕಿ.ಮೀ ದೂರವಿದ್ದು, ನಿಗದಿತ ಸಮಯಕ್ಕೆ ತಲುಪಲಾಗದೆ ದಾರಿ ಮಧ್ಯೆಯೇ ಪ್ರಾಣ ಬಿಡುತ್ತಿದ್ದಾರೆ.. ಇದು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಿವಿಗೆ ಬಿದ್ದು ಆದಷ್ಟು ಬೇಗ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿ ಎಂಬುದು ಜನರ ಒತ್ತಾಯವಾಗಿದೆ. .