ಕಾರವಾರ: ಫಿಲ್ಮ್ ಫೇರ್ ಓಟಿಟಿ ಅವಾರ್ಡ್ಸ್ ಗೆ ಉತ್ತರಕನ್ನಡ ಮೂಲದ ಕನ್ನಡದ ಕುವರಿ ಆಧ್ಯಾ ಆನಂದ್ ನಾಮಿನೇಟ್ ಆಗುವ ಮೂಲಕ ಅವಾರ್ಡ್ ರೇಸ್ಗೆ ನಾಮಿನೇಟ್ ಆದ ಅತಿ ಕಿರಿಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಕ್ರಷ್ಡ್ ಸಿರೀಸ್ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿರುವ ಆದ್ಯಾ ಆನಂದ್ ಇದೀಗ ಎಲ್ಲ ಗಮನ ಸೆಳೆದಿದ್ದಾಳೆ. ಸದ್ಯ ಫಿಲ್ಮ್ ಫೇರ್ ಒಟಿಟಿ ಅವಾರ್ಡ್ಸ್ ಗೆ 2021ರ ಆಗಸ್ಟ್ 1 ರಿಂದ 2022ರ ಜುಲೈ 31ರ ಒಳಗೆ ಬಿಡುಗಡೆಯಾದ ಹಿಂದಿ ವೆಬ್ ಒರಿಜಿನಲ್ಸ್ ಗಳನ್ನ ನಾಮಿನೇಟ್ ಮಾಡಲಾಗುತ್ತಿದೆ.
ಅದರಂತೆ ಈ ವರ್ಷದ ಜನವರಿಯಲ್ಲಿ ‘ಅಮೆಜಾನ್ ಮಿನಿ ಟಿವಿ’ಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದ್ದ ರೊಮ್ಯಾಂಟಿಕ್ ಮತ್ತು ಕಾಮಿಡಿ ಕಥಾ ಹಂದರದ ‘ಕ್ರಷ್ಡ್’ ಸಿರೀಸ್ ಈ ಬಾರಿಯ ಫಿಲ್ಮ್ ಫೇರ್ ಓಟಿಟಿ ಅವಾರ್ಡ್ ರೆಸ್‍ನ ‘ಬೆಸ್ಟ್ ಸಿರೀಸ್’ ವಿಭಾಗದಲ್ಲಿ ನಾಮಿನೇಟ್ ಆಗಿದ್ದು, ಜೊತೆಗೆ ಈ ಸಿರೀಸ್‍ನಲ್ಲಿ ಲೀಡ್ ರೋಲ್‍ನಲ್ಲಿ ನಟಿಸಿದ್ದ ಆದ್ಯಾ ಆನಂದ್ ಕೂಡ ‘ಬೆಸ್ಟ್ ಆ್ಯಕ್ಟರ್ ಫೀಮೇಲ್’ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.
ಬಾಂಬೆ ಬೇಗಮ್' ವೆಬ್ ಸಿರೀಸ್ ಮೂಲಕ ಭಾರತೀಯ ಕಿರುತೆರೆ ಪ್ರವೇಶಿಸಿದ್ದ ಆದ್ಯಾ, ಕ್ರಷ್ಡ್ ಸಿರೀಸ್‍ನಲ್ಲಿ ಮುದ್ದು ಮುದ್ದಾಗಿ ‘ಮಥುರ್’ ಎಂಬ ಪಾತ್ರದಲ್ಲಿ ನಟಿಸಿದ್ದಳು. ಈಕೆಯ ನಟನೆಗಂತೂ ಯುವಕರು ಫಿದಾ ಆಗಿದ್ದರು. ‘ಕ್ರಷ್ಡ್', ಶಾಲಾ ದಿನಗಳಲ್ಲಿ ಅನುಭವಕ್ಕೆ ಬರುವ ರೊಮ್ಯಾಂಟಿಕ್ ಪ್ರೇಮ ಕಥನವಾಗಿದ್ದು, ಎಲ್ಲ ವಯಸ್ಸಿನವರಿಗೂ ಒಗ್ಗುವ ಸುಂದರ ಕಥೆ ಹೊಂದಿದೆ. ಹೀನಾ ಡಿಸೋಜಾ ಮತ್ತು ಮಂದರ್ ಕುರುಂಡ್ಕರ್ ನಿರ್ದೇಶನದ ಈ ಸರಣಿಯಲ್ಲಿ ರುದ್ರಾಕ್ಷ್ ಜೈಸ್ವಾಲ್ ಮತ್ತು ಆದ್ಯಾ ಆನಂದ್ ಲೀಡ್ ರೋಲ್‍ನಲ್ಲಿ ನಟಿಸಿದ್ದರು.
ಡಿ.1ರಂದು ‘ಕ್ರಷ್ಡ್’ನ ಸಿರೀಸ್- 2 ಕೂಡ ಬಿಡುಗಡೆಯಾಗಿದ್ದು, ಇದರ ನಡುವೆಯೇ ಮೊದಲ ಸಿರೀಸ್‍ನಲ್ಲಿ ಆದ್ಯಾ ಬೆಸ್ಟ್ ಆ್ಯಕ್ಟರ್ ಅವಾರ್ಡ್ಸ್ ಗೆ ನಾಮಿನೇಟ್ ಆಗಿರುವುದು ಚಿತ್ರ ತಂಡದ ಖುಷಿಯನ್ನ ಇಮ್ಮಡಿಗೊಳಿಸಿದೆ. ಆದ್ಯಾ ಫಿಲ್ಮ್ ಫೇರ್ ಜೊತೆಗೆ ಇನ್ನೂ ಎರಡು ಅವಾರ್ಡ್ಗೆ ನಾಮಿನೇಟ್ ಆಗಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಆದ್ಯಾ, ಕನ್ನಡದಲ್ಲೂ ನಟನೆಗೆ ಅವಕಾಶಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಓದಿ: RRRಗೆ ಹಾಲಿವುಡ್ನ ಪ್ರತಿಷ್ಠಿತ 'ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್' ಪ್ರಶಸ್ತಿ