ಕಾರವಾರ : ಸ್ನೇಹಿತರೊಂದಿಗೆ ಪಾರ್ಟಿಗೆಂದು ತೆರಳಿದ್ದ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ಜೊಯಿಡಾ ತಾಲೂಕಿನ ಅಣಶಿಯಲ್ಲಿ ನಡೆದಿದೆ. ಅಣಶಿಯ ದಿಗಂಬರ ಮಡಿವಾಳ (23) ಕಾಣೆಯಾದ ಯುವಕ ಎಂದು ಗುರುತಿಸಲಾಗಿದೆ.
ಸ್ನೇಹಿತ ಉದಯ ಪೆಡ್ನೇಕರ್ ಹುಟ್ಟುಹಬ್ಬವಿದೆ. ಅಣಶಿ ಫಾರೆಸ್ಟ್ ಡಿಪಾರ್ಟಮೆಂಟ್ನವರು ಕರೆಯುತ್ತಿದ್ದಾರೆ. ನೇಚರ್ ಕ್ಯಾಂಪ್ ಬಳಿ ಇರುವ ಕಾಪೋಯಿ ಹಳ್ಳದ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ಹೋಗಿ ಊಟ ಮಾಡಿ ಬರುತ್ತೇನೆ ಎಂದು ದಿಗಂಬರ ಬೆಳಗ್ಗೆ ಹೋಗಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಸಂಜೆ 4 ಗಂಟೆಗೆ ಮಗನ ಜೊತೆಗೆ ತೆರಳಿದ್ದ ವಿನಾಯಕ ಪೆಡ್ನೇಕರ್ ಮನೆಯ ಬಳಿಗೆ ಬಂದು ದಿಗಂಬರ ಹಳ್ಳದಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿದ್ದಾನೆ. ಅವನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಕೂಡಲೇ ಅವನೊಂದಿಗೆ ತೆರಳಿ ಹುಡುಕಾಟ ನಡೆಸಿದ್ರೂ ಮಗ ಪತ್ತೆಯಾಗಿಲ್ಲ.
ಹೀಗಾಗಿ, ನಮ್ಮ ಮಗನನ್ನು ಹುಡುಕಿಕೊಡುವಂತೆ ಆತನ ತಂದೆ ಶಿವಾನಂದ ಮಡಿವಾಳ ದೂರು ನೀಡಿದ್ದಾರೆ. ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.