ಭಟ್ಕಳ (ಉತ್ತರಕನ್ನಡ): ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಅಕ್ಕನ ಮನೆಯ ಪಕ್ಕದಲ್ಲೇ ಇರುವ ಖಾಸಗಿಯವರ ಬಾವಿಗೆ ಹಾರಿ ಬುಧವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಅಳ್ವೆಕೋಡಿಯ ನಿವಾಸಿ ಮಾಸ್ತಮ್ಮ ಮೊಗೇರ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ 7 ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಜನವರಿಯಲ್ಲಿ ಇವರ ಪತಿ ಮೃತಪಟ್ಟಿದ್ದು, ತದನಂತರ ಇವರು ಅವರ ಅಕ್ಕನ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಇವರು ಬುಧವಾರ ತನ್ನ ಅಕ್ಕನ ಮನೆಯ ಪಕ್ಕದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಪಾಂಡು ಮಂಜು ಮೊಗೇರ ದೂರು ನೀಡಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆಯ ಎ.ಎಸ್.ಐ ಮಂಜುನಾಥ ಗೌಡ, ತನಿಖಾಧಿಕಾರಿ ದಿನೇಶ ದಾತೇಕರ, ಸಿಬ್ಬಂದಿ ದೀಪಕ್ ನಾಯಕ, ಮಲ್ಲಿಕಾರ್ಜುನ ನಾಯ್ಕ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.