ಕಾರವಾರ (ಉತ್ತರ ಕನ್ನಡ) : ಮಕ್ಕಳನ್ನು ಬಸ್ ನಿಲ್ದಾಣದ ಬಳಿ ಬಿಟ್ಟು ನಾಪತ್ತೆಯಾಗಿದ್ದ ಮಹಿಳೆಯೋರ್ವಳ ಬೈಕ್ ಕುಮಟಾದ ಹೆಡ್ ಬಂದರು ಬಳಿ ಪತ್ತೆಯಾಗಿದೆ. ಬೈಕ್ನಲ್ಲಿ ಮಹಿಳೆ ಬರೆದಿಟ್ಟಿದ್ದರು ಎನ್ನಲಾದ ಡೆತ್‌ನೋಟ್ ಸಹ ಸಿಕ್ಕಿದೆ. ಇದೀಗ ಕಣ್ಮರೆಯಾಗಿರುವ ಮಹಿಳೆಗಾಗಿ ಸಮುದ್ರದಲ್ಲಿ ಹುಡುಕಾಟ ಮುಂದುವರೆದಿದೆ.
ಕುಮಟಾ ತಾಲೂಕಿನ ಸಾಂತಗಲ್ ಮೂಲದ ನಿವೇದಿತಾ ನಾಗರಾಜ ಭಂಡಾರಿ ನಾಪತ್ತೆಯಾಗಿರುವ ವಿವಾಹಿತೆ. ಶನಿವಾರ ಮನೆಯಿಂದ ಇಬ್ಬರು ಗಂಡುಮಕ್ಕಳನ್ನು ಸ್ಕೂಟಿ ಮೇಲೆ ಕರೆತಂದಿದ್ದ ಈಕೆ ಕುಮಟಾದ ಪಿಕ್ಅಪ್ ಬಸ್ ನಿಲ್ದಾಣದ ಬಳಿ ಬಿಟ್ಟು ತೆರಳಿದ್ದಳು. ಆದರೆ ನಂತರ ಬಾರದೆ ಇದ್ದಾಗ ಮಹಿಳೆಗಾಗಿ ಹುಡುಕಾಟ ನಡೆಸಿದ್ದು, ಈಕೆಯ ಸ್ಕೂಟರ್ ಕುಮಟಾದ ಹೆಡ್ ಬಂದರು ಬಳಿ ಪತ್ತೆಯಾಗಿತ್ತು.
ಕಾಲುಂಗುರ ಹಾಗೂ ಡೆತ್‌ನೋಟ್ ಪತ್ತೆ : ಕೊನೆಗೆ ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಮಹಿಳೆಗಾಗಿ ಹೆಡ್ ಬಂದರು ಬಳಿ ಹುಡುಕಾಟ ನಡೆಸಿದ್ದರು. ಆದರೆ ಸಮುದ್ರದಲ್ಲಿ ಮಹಿಳೆಯ ವೇಲ್ ಮಾತ್ರ ಸಿಕ್ಕಿದ್ದರಿಂದ ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ಈ ವೇಳೆ ಮಹಿಳೆ ನಿಲ್ಲಿಸಿದ್ದ ಬೈಕ್ನಲ್ಲಿ ಆಕೆಯ ಮಾಂಗಲ್ಯ, ಕಾಲುಂಗುರ ಹಾಗೂ ಡೆತ್‌ನೋಟ್ ಕೂಡ ಪತ್ತೆಯಾಗಿದೆ.
ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಇನ್ನು ಮಹಿಳೆಗಾಗಿ ಕುಮಟಾದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಉದಯ ಹರಿಕಂತ್ರ ಹಾಗೂ ಗಣೇಶ ಹುಡುಕಾಟ ನಡೆಸಿದ್ದರು. ಜೊತೆಗೆ ಪೊಲೀಸರು ಕೂಡ ಸ್ಥಳದಲ್ಲಿದ್ದು ಹುಡುಕಾಟ ನಡೆಸಿದ್ದು, ಈವರೆಗೆ ಮೃತದೇಹ ಪತ್ತೆಯಾಗಿಲ್ಲ ಎಂದು ಲೈಫ್ ಗಾರ್ಡ್ ಮಾಹಿತಿ ನೀಡಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತ್ಯೇಕ ಪ್ರಕರಣ- ಡೆತ್‌ನೋಟ್ ಬರೆದಿಟ್ಟು ಚಾಲಕ ಆತ್ಮಹತ್ಯೆ: ಕಾರು ಚಾಲಕನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ (ಆಗಸ್ಟ್ 22-2023) ನಡೆದಿತ್ತು. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀನ್ ವ್ಯೂ ಅಪಾರ್ಟ್ಮೆಂಟ್ ಟೆರೇಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೇರಳ ಮೂಲದ ಜೊಮೊನ್ ವರ್ಗಿಸ್ ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದುಬಂದಿತ್ತು.
ಇದನ್ನೂ ಓದಿ : ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ಚಾಲಕ ಆತ್ಮಹತ್ಯೆ