ಕಾರವಾರ: ಕೋವಿಡ್ ವಾರ್ಡ್ನಿಂದ ಎರಡು ಬಾರಿ ತಪ್ಪಿಸಿಕೊಂಡು ಪರಾರಿಯಾಗಿ ಆತಂಕ ಸೃಷ್ಟಿಸಿದ್ದ ಸೋಂಕಿತ ಕತರ್ನಾಕ್ ಕಳ್ಳ ಇಂದು ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಎರಡು ಬಾರಿ ಕೋವಿಡ್ ವಾರ್ಡ್ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಮೊದಲ ಬಾರಿ ಕದ್ರಾ ಬಳಿ, ಎರಡನೇ ಬಾರಿ ನಗರದ ನಾಡಗೇರಿ ಬಳಿ ಪೊಲೀಸರು ಮರಳಿ ವಶಕ್ಕೆ ಪಡೆದಿದ್ದರು. ಇಂದು ಈತನ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಕಾರವಾರದ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ನಿಂದ ಪೊಲೀಸರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ನಗರ ಠಾಣೆ ಪೊಲೀಸರು ಈತನನ್ನು ಧಾರವಾಡದಲ್ಲಿ ವಶಕ್ಕೆ ಪಡೆದಿದ್ದರು. ಆದರೆ ಅನಾರೋಗ್ಯ ಹಿನ್ನೆಲೆ ಈತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಕಾರವಾರದ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಯಿಂದ ಎರಡು ಬಾರಿ ಈತ ತಪ್ಪಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಈತ ಕಾರಣವಾಗಿದ್ದ. ಎರಡು ಬಾರಿ ಪೊಲೀಸರು ಹರಸಾಹಸ ಪಟ್ಟು ಬಂಧಿಸಿ ವಾಪಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದೀಗ ಈತನಿಗೆ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.