ಕಾರವಾರ: ಪಕ್ಷದ ಕೆಲವರು ಆಮಿಷಕ್ಕೆ ಬಲಿಯಾದ ಕಾರಣ ಕುತಂತ್ರದಿಂದ ಸೋಲಿಸಲಾಗಿದೆ. ಆದರೆ ಇದನ್ನು ಸೋಲು ಎಂದು ಭಾವಿಸಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಾಮರ್ಥ್ಯ ತೋರಿಸಬೇಕಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ್ ಹೇಳಿದರು.
ಕಾರವಾರದ ದೇವಳಿವಾಡದ ತಮ್ಮ ಮನೆಯ ಬಳಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ರೂಪಾಲಿ ನಾಯ್ಕ ಯಾವತ್ತೂ ಕಾರ್ಯಕರ್ತರ ಜೊತೆ ಇದ್ದಾಳೆ. ಬಿಜೆಪಿ ಕಾರ್ಯಕರ್ತರ ಋಣ ತೀರಿಸಲು ಸಾಧ್ಯವಿಲ್ಲ. ಯಾವತ್ತೂ ಅಧಿಕಾರಕ್ಕಾಗಿ, ಕುರ್ಚಿಯಲ್ಲಿರಲು ಯಾವತ್ತೂ ಆಸೆ ಪಟ್ಟವಳಲ್ಲ. ಅಧಿಕಾರ ಶಾಶ್ವತವೆಂದು ಹೋರಾಡಿದವಳೂ ಅಲ್ಲ. ಕಾರ್ಯಕರ್ತರ ನೋವು ನನಗೆ ಸಹಿಸಲಾಗಿಲ್ಲ. ಕರೆಯದಿದ್ದರೂ ಇಷ್ಟೊಂದು ಜನ ಸೇರಿರುವುದು ನೀವು ನನ್ನ ಮೇಲಿಟ್ಟ ಪ್ರೀತಿಗೆ ಸಾಕ್ಷಿ. ಇದರಿಂದಲೇ ನಾನಿನ್ನೂ ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ ಎಂದರು.
ರೂಪಾಲಿ ನಾಯ್ಕ ಸಾಮಾನ್ಯಳಲ್ಲ. ಯಾರು ಯಾರನ್ನು ಸೋಲಿಸಿದ್ದಾರೆಂಬುದು ಜನಕ್ಕೆ ಗೊತ್ತಿದೆ. ಒಂದು ಮಹಿಳೆಯನ್ನು ಸೋಲಿಸಲು ಎಲ್ಲಾ ನಾಯಕರು ಒಂದಾಗಿದ್ದರು, ನಾಚಿಕೆ ಆಗಬೇಕು ಅವರಿಗೆ. ನಮಗೆ ಸೋಲಾಗಿಲ್ಲ, ಅವರಿಗಾಗಿದ್ದು ಸೋಲು. ಕೇವಲ 2,100 ಮತಗಳ ಅಂತರದಿಂದ ಗೆದ್ದಿದ್ದಾರೆ ಆದರೆ, 40 - 50 ಸಾವಿರ ಮತಗಳಿಂದ ಗೆದ್ದಿದ್ದಾರೆಂಬಂತೆ ಖುಷಿ ಪಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮನೆಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಿಸುವವರಿಗೆ ನಾಚಿಕಯಾಗಬೇಕು ಎಂದು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕರ್ತರು ಹೆದರಬೇಡಿ: ಇನ್ನೂ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ, ಅಷ್ಟರಲ್ಲೇ ಐಬಿಯಲ್ಲಿ 5 ಪರ್ಸೆಂಟ್ ಕಮಿಷನ್ ಮಾತುಕತೆ ಮಾಡುತ್ತಿದ್ದಾರಂತೆ. ನನಗೆಷ್ಟು ಟಾರ್ಚರ್ ಮಾಡಿದರು. ಸುಳ್ಳನ್ನೇ ಸತ್ಯ ಮಾಡಲು ಹೊರಟರು. ಆದರೆ ದೇವರ ಸಾಕ್ಷಿಯಾಗಿ ಹೇಳುತ್ತೇನೆ, ಅವರಿಗೆ ಮುಂದೆ ಮಾರಿ ಹಬ್ಬ ಕಾದಿದೆ. ಹಿಂದೆ ಅಧಿಕಾರದಲ್ಲಿ ಹೇಗಿದ್ದೆನೋ ಹಾಗೆ ಮುಂದೆಯೂ ನಿಮ್ಮ ಜೊತೆ ಇರುತ್ತೇನೆ. ಕಾರ್ಯಕರ್ತರು ಹೆದರಬೇಡಿ, ನಾನಿದ್ದೇನೆ. ನಾವು ಹುಲಿಗಳು, ಇಲಿಗಳಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ಈ ದೇಹ, ಅಧಿಕಾರ ಯಾವತ್ತೂ ಶಾಶ್ವತವಲ್ಲ. ಕೊಟ್ಟ ಮಾತುಗಳನ್ನ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕರ್ತರ ಮೋಸದಿಂದ ಸೋಲು: ಇನ್ನು ಸಭೆಯಲ್ಲಿ ಮಹಿಳೆಯೋರ್ವಳ ಮೈ ಮೇಲೆ ಭಾರ (ದೇವರು) ಬಂದು ರೂಪಾಲಿ ನಾಯ್ಕ್ ನಿಮ್ಮ ಸೋಲಿಗೆ ನಿಮ್ಮ ಕಾರ್ಯಕರ್ತರೇ ಮೋಸ ಮಾಡಿದ್ದಾರೆ. ಸೋಲಿಗೆ ನೀವು ಅಂಜಬೇಕಿಲ್ಲ. ನಿಮ್ಮ ಸೋಲಿಗೆ ಹಣದ ಆಮಿಷ ಒಡ್ಡಲಾಗಿದೆ. ಆದರೆ ನೀನು ಇದಕ್ಕೆ ಹೇದರಬೇಕಿಲ್ಲ. ಮುಂದಿನ ದಿನಗಳಲ್ಲಿ ಮಂಜುನಾಥ ಸ್ವಾಮಿ ನಿನ್ನನ್ನು ಕಾಪಾಡುತ್ತಾನೆ ಎಂದು ನುಡಿದರು.
ಈ ಬಾರಿ ರಾಜ್ಯ ಸಭೆ ಚುನಾವನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಮರಳಿ ಅಧಿಪತ್ಯ ಸಾಧಿಸಿದೆ. ಕಳೆದ ಬಾರಿ ಕಳೆದುಕೊಂಡಿದ್ದ ಐದು ಸ್ಥಾನಗಳ ಪೈಕಿ ನಾಲ್ಕರಲ್ಲಿ ಮತ್ತೆ ಗೆಲುವನ್ನು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರದ ನಡುವೆಯೂ ಬಿಜೆಪಿ ಕೇವಲ ಎರಡು ಸ್ಥಾನ ಮಾತ್ರ ಪಡೆದುಕೊಂಡಿತ್ತು.
ಇದನ್ನೂ ಓದಿ: ಆದಿ ಚುಂಚನಗಿರಿಯ ಕಾಲಭೈರವನಿಗೆ ವಿಶೇಷ ಪೂಜೆ ನೆರವೇರಿಸಿದ ಡಿಸಿಎಂ ಡಿಕೆ ಶಿವಕುಮಾರ್