ಶಿರಸಿ: ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸಮಾಜ ಸೇವಕರೋರ್ವರು ಇದಕ್ಕೆ ತದ್ವಿರುದ್ಧ ಎನ್ನುವಂತಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಸರ್ಕಾರಿ ಆಸ್ಪತ್ರೆಗೆ ಅಂದಾಜು 30 ಲಕ್ಷ ರೂ.ಗಳ ಉಪಕರಣಗಳನ್ನು ದಾನವಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಯಲ್ಲಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಮಾಜ ಸೇವಕ ಬಾಲಕೃಷ್ಣ ನಾಯಕ್ ಸುಮಾರು 12 ಲಕ್ಷ ರೂ. ಮೌಲ್ಯದ ವೆಚ್ಚದಲ್ಲಿ ವಾಕ್ಸಿನೇಷನ್ ಸೆಂಟರ್ ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ ಸುಮಾರು 18 ಲಕ್ಷ ರೂ. ವೆಚ್ಚದ ಆ್ಯಂಬುಲೆನ್ಸ್ ದಾನವಾಗಿ ನೀಡಿದ್ದಾರೆ. ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎಂದು ಬಾಲಕೃಷ್ಣ ನಾಯಕ್ ತೋರಿಸಿಕೊಟ್ಟಿದ್ದು, ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ಸಮಾಜ ಸೇವಕರಾಗಿದ್ದಾರೆ.
ಇನ್ನು ಇವರಂತೆಯೇ ಇವರ ಅಣ್ಣ ಸಹ ಗೋವಾದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನೇ ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಇವರು, ತಮ್ಮ ಕೈಲಾದ ಸೇವೆ ಮಾಡುತ್ತೇವೆ ಎಂದಿದ್ದಾರೆ.
ಸಮಾಜ ಸೇವಕ ಬಾಲಕೃಷ್ಣ ನಾಯಕ್ ಅವರಿಗೆ ದಾನ ಮಾಡಲು ಕಾರ್ಮಿಕ ಸಚಿವ ಹೆಬ್ಬಾರ್ ಪ್ರೇರಣೆಯಾಗಿದ್ದಾರಂತೆ. ಇದರಿಂದ ಸ್ವತಃ ಸಚಿವ ಹೆಬ್ಬಾರ್ ತಮ್ಮ ಕ್ಷೇತ್ರದ ವ್ಯಾಕ್ಸಿನೇಷನ್ ಸೆಂಟರ್ ಲೋಕಾರ್ಪಣೆಗೊಳಿಸಿದ್ದು, ಇಂತಹ ಕಷ್ಟಕರ ಸಂದರ್ಭದಲ್ಲಿ ಅವರು ಸರ್ಕಾರದ ಜೊತೆಯಾಗಿದ್ದಾರೆ. ಜನತೆಗೆ ನೆರವು ನೀಡಿದ್ದು ಅಭಿನಂದನೀಯ ಎಂದು ತಿಳಿಸಿದ್ದಾರೆ. ಅಲ್ಲದೇ ಎನ್ಜಿಒಗಳು ಮುಂದೆ ಬಂದು ಅದನ್ನು ಸದುಪಯೋಗಪಡಿಸಿಕೊಂಡಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಯಲ್ಲಾಪುರ ಆಸ್ಪತ್ರೆ ಉದಾಹರಣೆ ಎಂದರು.
ಇನ್ನು ಸಾಮಾಜಿಕ ಅಂತರ ಪಾಲನೆಯೊಂದಿಗೆ 18 ವರ್ಷ ಮೇಲ್ಪಟ್ಟವರಿಗೆ ವಾಕ್ಸಿನ್ ನೀಡಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ವಾಕ್ಸಿನೇಷನ್ ಸೆಂಟರ್ನಲ್ಲಿ ಇಡಲಾಗಿದೆ. ಅದೇ ರೀತಿ ಕೊರೊನಾ ಸೇರಿದಂತೆ ಇತರೆ ಯಾವುದೇ ಸಂದರ್ಭದಲ್ಲಿ ತುರ್ತು ಸೇವೆ ಅಗತ್ಯ ಇದ್ದಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಲಾಗಿದ್ದು, ಇತರ ಕ್ಷೇತ್ರಗಳಲ್ಲಿಯೂ ಈ ರೀತಿ ಸಮಾಜ ಸೇವಕರು ಮುಂದೆ ಬಂದು ಜನರ ಅಭಿವೃದ್ಧಿಗೆ ಕೈ ಜೋಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಕೋವಿಡ್ ವೇಳೆ ನೂತನ ಸಂಸತ್ ಭವನ, ಪಿಎಂ ನಿವಾಸವಿರುವ 'ಸೆಂಟ್ರಲ್ ವಿಸ್ತಾ' ಬೇಕೇ? ನಾಳೆ ದೆಹಲಿ ಹೈಕೋರ್ಟ್ ತೀರ್ಪು