ಕಾರವಾರ: ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿಯ ಮನಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಜನರಿಂದ ಭಿಕ್ಷೆ ಬೇಡಿ, ಹಣ ನೀಡಲು ಮುಂದಾದ ಘಟನೆ ಯಲ್ಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಯಲ್ಲಾಪುರದ ತಟಗಾರ ಗ್ರಾಮದ ಸರ್ವೇ ನಂ. 12ರಲ್ಲಿನ ಕ್ಷೇತ್ರವನ್ನು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಗಜಾನನ ಭಟ್ಟ ಹಾಗೂ ನಾರಾಯಣ ಭಟ್ಟ ಎಂಬ ಸಹೋದರರಿಬ್ಬರು ವಿಭಾಗ ಮಾಡಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಹೀಗಾಗಿ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿಗೆ ಅವರು ಬಯಸಿದ ಹಣ ನೀಡಲು ಮುಂದಾಗಿದ್ದೇನೆ ಎಂದು ಗಜಾನನ ಭಟ್ಟ ಅವರ ಪುತ್ರ ಅಚ್ಯುತಕುಮಾರ ತಿಳಿಸಿದ್ದಾರೆ.
ಭಷ್ಟಾಚಾರದ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನ ಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯ ಮಾಡಬೇಕು ಎಂದು ಮೂರು ವರ್ಷದ ಹಿಂದೆಯೇ ನ್ಯಾಯಾಲಯದ ಮೊರೆ ಹೋಗಿದ್ದು, ಜಿಲ್ಲಾಡಳಿತ ಆ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಎಲ್ಲಾ ಕಚೇರಿಗಳಲ್ಲಿ ಆ ಆದೇಶ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದರು.
ಕೋರ್ಟ್ ಆದೇಶದ ಅನ್ವಯ ಯಲ್ಲಾಪುರದ ತಹಶೀಲ್ದಾರ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವಂತೆ ತಹಶೀಲ್ದಾರ್ ಶ್ರೀಕೃಷ್ಣ ಕಾಮೇಕರ್ ಅವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ತಹಶೀಲ್ದಾರ್ ಪೂರಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ಲಂಚ ಕೇಳಿದವರಿಗೆ ಹಣ ನೀಡಲು ಜನರಿಂದ ಸ್ವೀಕೃತವಾದ 136 ರೂ. ಅನ್ನು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೃಕೃತಿ ವಿಕೋಪ ನಿಧಿಗೆ ನೀಡಲಾಗುವುದು ಎಂದು ಅಚ್ಚುತಕುಮಾರ್ ತಿಳಿಸಿದ್ದಾರೆ.