ಭಟ್ಕಳ: ಪಕ್ಕದ ಮನೆಯಲ್ಲಿ ಹತ್ಯೆಯಾದ ಮಹಿಳೆಯ ಶವ ನೋಡಿ ವ್ಯಕ್ತಿವೋರ್ವ ಗಾಬರಿಗೊಂಡು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಶಿರಾಲಿ ಪಂಚಾಯಿತಿಯ ಚಿತ್ರಾಪುರದ ನಿವಾಸಿ ಗಜಾನನ ಮಾಂಜ್ರೆಕರ (43) ಮೃತ ವ್ಯಕ್ತಿ. ಇವರು ಶನಿವಾರ ಕೊಪ್ಪದ ಕೊಂಕಣಾತಿಬೈಲನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿ ಪಕ್ಕದ ಮನೆಯಲ್ಲಿ ಶಬ್ದ ಬಂದಿದ್ದು ಅದನ್ನು ನೋಡಲು ಹೋಗಿದ್ದಾರೆ.
ಅಲ್ಲಿ ಗಾಯಗೊಂಡ ಲಕ್ಷ್ಮಿ ನಾಯ್ಕ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿರುವುದನ್ನು ನೋಡಿ ಗಾಬರಿಗೊಂಡಿದ್ದು, ಅಲ್ಲಿಂದ ಬರುವಾಗ ದಾರಿಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಗಜಾನನರನ್ನು ಮುರ್ಡೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಹೋಗುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟಿರುವುದನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.
ಮೃತರ ಬಲ ಕೆನ್ನೆಯ ಭಾಗ ಉಬ್ಬಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮೃತರ ಸಹೋದರ ಉಲ್ಲಾಸ ಮಾಂಜ್ರೆಕರ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.