ಕಾರವಾರ: ಕೇರಳದಲ್ಲಿ ಮಾಟ ಮಂತ್ರಕ್ಕಾಗಿ ತನ್ನ ಮಗಳನ್ನೇ ಬಲಿಕೊಟ್ಟು ತಲೆಮರಿಸಿಕೊಂಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕೇರಳ ರಾಜ್ಯದ ಸನು ಮೋಹನ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನು ಮಾಟ ಮಂತ್ರದ ಉದ್ದೇಶಕ್ಕಾಗಿ ತನ್ನ 13 ವರ್ಷದ ಮಗಳನ್ನೇ ಬಲಿ ನೀಡಿದ ಕುರಿತು ಕೇರಳದ ತಿಕ್ಕಾಕ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ದೂರು ದಾಖಲಾಗಿತ್ತು.
ಆದರೆ, ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದನು. ಮೊಬೈಲ್ ಲೊಕೇಷನ್ ಆಧಾರದ ಮೇಲೆ ಈ ಆರೋಪಿ ಕಾರವಾರದಲ್ಲಿ ಇರುವುದನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದರು. ಹೀಗಾಗಿ ಆರೋಪಿಯ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ನೆರವು ಕೇಳಿದ್ದರು.
ಅದರಂತೆ ಕಾರ್ಯಾಚರಣೆ ನಡೆಸಿದ ಉತ್ತರ ಕನ್ನಡ ಪೊಲೀಸರು ಆರೋಪಿಯನ್ನು ಕಾರವಾರದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕೇರಳದಿಂದ ಆಗಮಿಸಿದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.