ಕಾರವಾರ: ರಾಜ್ಯದಲ್ಲಿ ಪ್ರವಾಹ ಸಂಭವಿಸಿ ಸಾಕಷ್ಟು ಅನಾಹುತವೇ ಸೃಷ್ಟಿಯಾಗಿತ್ತು. ಉತ್ತರಕನ್ನಡ ಜಿಲ್ಲೆಯ ನದಿತೀರ ಪ್ರದೇಶದ ನಿವಾಸಿಗಳು ಈಗಲೂ ನೆರೆ ನೆನಪಿಸಿಕೊಂಡರೆ ಬೆಚ್ಚಿಬೀಳುತ್ತಿದ್ದಾರೆ. ಇಲ್ಲಿನ ಕುಟುಂಬವೊಂದು ನೆರೆಯ ಅಬ್ಬರಕ್ಕೆ ಅಕ್ಷರಶಃ ಕುಗ್ಗಿ ಹೋಗಿದೆ. ಮನೆಗೆ ಆಧಾರವಾಗಿದ್ದ ಮಗನೊಂದಿಗೆ ಮನೆಯನ್ನೂ ಕಳೆದುಕೊಂಡು ಇದೀಗ ಬೇರೆಯವರ ಮನೆಯಲ್ಲಿ ಜೀವನ ದೂಡುವ ಪರಿಸ್ಥಿತಿ ಈ ಕುಟುಂಬಕ್ಕೆ ಬಂದಿದೆ.
ಕಳೆದೆರಡು ವಾರಗಳ ಹಿಂದೆ ಅಬ್ಬರಿಸಿದ್ದ ನೆರೆಗೆ ಇಲ್ಲಿನ ಶಿರೂರು ಗ್ರಾಮದ ಯುವಕನೋರ್ವ ಕೊಚ್ಚಿ ಹೋಗಿದ್ದು ಆತನನ್ನು ಅವಲಂಬಿಸಿದ್ದ ಕುಟುಂಬವೀಗ ಸಂಕಷ್ಟ ಅನುಭವಿಸುತ್ತಿದೆ. ಜುಲೈ 23ರ ಬೆಳಗಿನ ವೇಳೆ ಗ್ರಾಮಕ್ಕೆ ಹೊಂದಿಕೊಂಡಿದ್ದ ಗಂಗಾವಳಿ ನದಿ ಉಕ್ಕಿ ಹರಿದಿತ್ತು. ಗ್ರಾಮದ ನಾಗರಿಕರು ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸಪಟ್ಟಿದ್ದರು. ಗ್ರಾಮದಲ್ಲಿರುವ ಅವರಿವರ ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸೇರಿಕೊಳ್ಳಲು ಪರದಾಡುವಂತಾಗಿತ್ತು. ಇದೇ ವೇಳೆ ನೀರಿನ ಹರಿವು ಹೆಚ್ಚಾದ ಪರಿಣಾಮ ಜೀವ ಉಳಿಸಿಕೊಳ್ಳಲು ದಾಟಿ ಬರುತ್ತಿದ್ದ ಯುವಕ ಗಂಗಾಧರ ಗೌಡ ಎಂಬಾತ ನೀರಿನಲ್ಲಿ ಕೊಚ್ಚಿ ಹೋಗಿದ್ದ.
ಇನ್ನು ಮೃತ ಗಂಗಾಧರ ಗೌಡ ಕುಟುಂಬದಲ್ಲಿ ಹಿರಿಯವನಾಗಿದ್ದು ಮನೆಗೆ ಆಧಾರ ಸ್ತಂಭವಾಗಿದ್ದ. ಆಂದ್ಲೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಜುಲೈ 23ರ ಬೆಳಿಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆಯೇ ನೆರೆ ಅಪ್ಪಳಿಸಿತ್ತು. ಮನೆಯ ಸುತ್ತ ನೀರು ತುಂಬುತ್ತಿದ್ದ ಪರಿಣಾಮ ಸಹೋದರ ರಮೇಶ್, ಅವರ ತಾಯಿ ಮತ್ತು ದೊಡ್ಡಮ್ಮ ದೋಣಿಯಲ್ಲಿ ಸುರಕ್ಷಿತ ಪ್ರದೇಶಕ್ಕೆ ಹೋಗುವಾಗ ಮಗುಚಿ ಬಿದ್ದಿದ್ದು ಆಗ ತಾಯಿ ಮತ್ತು ಚಿಕ್ಕಮ್ಮನನ್ನ ಮಗ ರಮೇಶ್ ರಕ್ಷಣೆ ಮಾಡಿದ್ದಾರೆ. ಆದ್ರೆ ಸ್ವಲ್ಪ ದೂರದಲ್ಲಿದ್ದ ಅಣ್ಣ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದು ಆತನನ್ನು ರಕ್ಷಿಸಲು ಯಾರಿಗೂ ಸಾಧ್ಯವಾಗಿಲ್ಲ.
ಕಳೆದ ಬಾರಿಯ ಪ್ರವಾಹದಲ್ಲಿ ಮನೆ ಬಿದ್ದುಹೋದಾಗ ಮೃತ ಗಂಗಾಧರ ತಮ್ಮ ದುಡಿಮೆಯಿಂದ ಕೆಲ ವರ್ಷಗಳಿಂದ ಮನೆಯೊಂದನ್ನು ನಿರ್ಮಿಸುತ್ತಿದ್ದರು. ಹೀಗಾಗಿ ತಾತ್ಕಾಲಿಕವಾಗಿ ಗದ್ದೆ ಮಧ್ಯೆ ಇರುವ ಚಿಕ್ಕ ಮನೆಯೊಂದಲ್ಲಿ ವಾಸವಾಗಿದ್ದರು. ದುರದೃಷ್ಟವಶಾತ್ ಗಂಗಾಧರ್ ಸಾವನ್ನಪ್ಪಿದ್ದಾರೆ.