ಕಾರವಾರ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ 100 ಜನರ ವಿರುದ್ಧ ಕಾರವಾರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 6 ರಂದು ಶಿರಸಿ ಮೂಲದ 42 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದ. ನಗರದ ಸರ್ವೋದಯ ನಗರದಲ್ಲಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲು ತಹಶೀಲ್ದಾರ್ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಸಿದ್ದತೆ ನಡೆಸಲು ಮುಂದಾಗಿದ್ದರು.
ಆದರೆ, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಸ್ಮಶಾನದ ಎದುರು ಘೇರಾವ್ ಹಾಕಿ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ತಡೆಯೊಡ್ಡಿದ್ದರು. ಈ ಕಾರಣದಿಂದ ಕಾರವಾರ ತಹಶೀಲ್ದಾರ್ ಆರ್.ವಿ. ಕಟ್ಟಿ ಇಂದು ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನೂರು ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.