ಕಾರವಾರ: ಬರೋಬ್ಬರಿ 14 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಉರಗ ಪ್ರೇಮಿಯೊಬ್ಬರು ಹರಸಾಹಸಪಟ್ಟು ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಮಾಸ್ತಿಹಳ್ಳ ಗ್ರಾಮದಲ್ಲಿ ನಡೆದಿದೆ. ಗಣಪು ಗೌಡ ಎನ್ನುವವರ ತೋಟದಲ್ಲಿ ಕಳೆದ ಒಂದು ವಾರದಿಂದ ಕಾಳಿಂಗ ಸರ್ಪ ಬೀಡುಬಿಟ್ಟಿತ್ತು. ಇದನ್ನು ಉರಗಪ್ರೇಮಿ ಪವನ್ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ತೋಟದ ಸಮೀಪದಲ್ಲೇ ಮನೆ ಇರುವ ಕಾರಣ ಒಂದು ವಾರ ಕಳೆದರೂ ಕಾಳಿಂಗ ಸರ್ಪ ತೆರಳದ ಹಿನ್ನೆಲೆ ಆತಂಕಗೊಂಡ ಗೌಡರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ದಿನೇಶ್ ಪಡುವಣಿ ಹಾಗೂ ಸದಾಶಿವ ಪುರಾಣಿಕ ತಮ್ಮೊಂದಿಗೆ ಉರಗಪ್ರೇಮಿ ಪವನ್ ನಾಯ್ಕ ಎಂಬುವರನ್ನ ಕರೆ ತಂದಿದ್ದರು. ಸರ್ಪದ ಸೆರೆಗೆ ಮುಂದಾದುತ್ತಿದ್ದಂತೆ ಏಕಾಏಕಿ ಪವನ್ ಮೇಲೆರಗಿ ದಾಳಿ ಮಾಡಲು ಪ್ರಯತ್ನಿಸಿತು. ಸುಮಾರು ಎರಡೂವರೆ ನಿಮಿಷಗಳ ಕಾಲ ಸಾಹಸಪಟ್ಟು ಕೊನೆಗೂ ಉರಗವನ್ನು ಚೀಲದೊಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾಳಿಂಗ ಸರ್ಪ ಸುಮಾರು 14 ಅಡಿ ಉದ್ದವಿದ್ದು, 9.5 ಕೆ.ಜಿ ತೂಕವಿದೆ. ರಕ್ಷಿಸಲ್ಪಟ್ಟ ಕಾಳಿಂಗವನ್ನು ಸುರಕ್ಷಿತವಾಗಿ ದೇವಿಮನೆಘಟ್ಟದ ನಿರ್ಜನ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ.. ಯುಗಾದಿ ಹಬ್ಬದಲ್ಲೂ ವಾಹನ ಸವಾರರ ಜೇಬಿಗೆ ಕತ್ತರಿ