ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ವೈದ್ಯರು, ಲ್ಯಾಬ್ ಸಿಬ್ಬಂದಿ ಸೇರಿ ಒಟ್ಟು 81 ಜನರಿಗೆ ಸೋಂಕು ತಗುಲಿ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಭಟ್ಕಳ ಒಂದರಲ್ಲಿಯೇ 45 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ತಾಲೂಕು ಆಸ್ಪತ್ರೆ ವೈದ್ಯ ಹಾಗೂ ಖಾಸಗಿ ಆಸ್ಪತ್ರೆ ಮತ್ತು ಲ್ಯಾಬ್ ಸಿಬ್ಬಂದಿಗೂ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು 19 ಪುರುಷರು, 7 ಯುವಕರು, 6 ಬಾಲಕರು, 11 ಮಹಿಳೆಯರು, ಓರ್ವ ಯುವತಿ, ಓರ್ವ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ.

ಕುಮಟಾದಲ್ಲಿಯೂ ಕೂಡ ಇಂದು 20 ಸೋಂಕಿತರು ಪತ್ತೆಯಾಗಿದ್ದು, 6 ಪುರುಷರು, 2 ಯುವಕರು, 5 ಮಹಿಳೆಯರು, 6 ಯುವತಿಯರು, ಓರ್ವ ಬಾಲಕಿಗೆ, ಹೊನ್ನಾವರದಲ್ಲಿ 7 ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ 9 ಮಂದಿಗೆ, ಕಾರವಾರದಲ್ಲಿ ನಾಲ್ಕು ಪುರುಷರು ಹಾಗೂ ಓರ್ವ ಯುವತಿ ಸೇರಿ ಐದು ಮಂದಿಗೆ, ಶಿರಸಿ ಹಾಗೂ ಯಲ್ಲಾಪುರದ ತಲಾ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ.
ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 435ಕ್ಕೆ ಏರಿಕೆಯಾಗಿದ್ದು, 269 ಮಂದಿ ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 165 ಮಂದಿ ಗುಣಮುಖರಾಗಿದ್ದು, ಓರ್ವ ವೃದ್ಧೆ ಬಲಿಯಾಗಿದ್ದಾರೆ.